ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆನ್‌ಲೈನ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿದ ಮಹಿಳೆಗೆ ಸೈಬರ್ ಖದೀಮರಿಂದ ₹1.30 ಲಕ್ಷ ವಂಚನೆ

ಮಂಗಳೂರು: ಆರ್ಡರ್ ಕ್ಯಾನ್ಸಲ್ ಆದ ಫ್ಯಾನ್ ಹಣದ ಮರುಪಾವತಿಗೆ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿದ ಮಹಿಳೆಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಬಿದ್ದು ₹1.30 ಲಕ್ಷ ಕಳೆದುಕೊಂಡಿದ್ದಾರೆ. ಈ ಕುರಿತು ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ 37 ವರ್ಷದ ಗೃಹಿಣಿಯೊಬ್ಬರು ಸೈಬರ್ ವಂಚನೆಗೆ ಬಲಿಯಾದವರು. ಅಕ್ಟೋಬರ್ 21ರಂದು ಮಹಿಳೆ ಅಮೆಜಾನ್ ಆನ್‌ಲೈನ್ ಶಾಪಿಂಗ್ ಆ್ಯಪ್ ಮೂಲಕ ಸೀಲಿಂಗ್ ಫ್ಯಾನ್ ಬುಕ್ ಮಾಡಿ, ಪತಿಯ ಗೂಗಲ್ ಪೇ ಮೂಲಕ ₹7,903 ಪಾವತಿಸಿದ್ದರು. ಆದರೆ ಕಾರಣಾಂತರಗಳಿಂದ ಆರ್ಡರ್ ರದ್ದಾಗಿತ್ತು. ಆರ್ಡರ್ ಕ್ಯಾನ್ಸಲ್ ಆಗಿದ್ದರೂ ಪಾವತಿಸಿದ ಹಣ ಖಾತೆಗೆ ವಾಪಸ್ ಜಮೆಯಾಗಿರಲಿಲ್ಲ.

ಹೀಗಾಗಿ ಅಕ್ಟೋಬರ್ 31ರಂದು ಮಹಿಳೆ ಗೂಗಲ್‌ನಲ್ಲಿ ಅಮೆಜಾನ್ ಕಸ್ಟಮರ್ ಕೇರ್ ನಂಬರ್ ಹುಡುಕಿದ್ದಾರೆ. ಈ ವೇಳೆ ಸಿಕ್ಕ 9940541823 ಸಂಖ್ಯೆಗೆ ಕರೆ ಮಾಡಿದ್ದಾರೆ. ಬಳಿಕ ಅದೇ ಸಂಖ್ಯೆಯಿಂದ ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಅಮೆಜಾನ್ ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಎಂದು ಪರಿಚಯಿಸಿಕೊಂಡಿದ್ದಾನೆ. ನಕಲಿ ಐಡಿ ಸಂಖ್ಯೆಯನ್ನೂ ನೀಡಿ, ರಿಫಂಡ್ ಪಡೆಯಲು ಗೂಗಲ್ ಪೇನಲ್ಲಿ ತಾನು ಹೇಳಿದಂತೆ ಮಾಡುವಂತೆ ಸೂಚಿಸಿದ್ದಾನೆ.

ವಂಚಕನ ಮಾತನ್ನು ನಂಬಿದ ಮಹಿಳೆ ಗೂಗಲ್ ಪೇ ತೆರೆದಿದ್ದಾರೆ. ಬಳಿಕ 'RAKILEL ISLAM' ಎಂದು ಸರ್ಚ್ ಮಾಡುವಂತೆ ಹೇಳಿ, 6003038834 ಸಂಖ್ಯೆಗೆ ಐಡಿ ರಚಿಸುವ ನೆಪದಲ್ಲಿ ಮೊದಲ ಹಂತದಲ್ಲಿ ₹80,000 ವರ್ಗಾಯಿಸಿಕೊಂಡಿದ್ದಾನೆ. ಇದಾದ ಬಳಿಕ ಮಹಿಳೆಯ ಬ್ಯಾಂಕ್ ಖಾತೆಯಿಂದ ಐಎಂಪಿಎಸ್ (IMPS) ಮೂಲಕ ಮತ್ತೊಂದು ₹50,000 ಹಣ ಆಟೋ-ಡೆಬಿಟ್ ಆಗಿದೆ.

ಹೀಗೆ ಒಟ್ಟು ₹1,30,000 ಹಣ ಕಳೆದುಕೊಂಡ ಬಳಿಕ ಮಹಿಳೆಗೆ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ತಕ್ಷಣವೇ ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬ್ಯಾಂಕ್ ಖಾತೆಗಳು ಹಾಗೂ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

Edited By :
Kshetra Samachara

Kshetra Samachara

04/11/2026 11:10 pm

Cinque Terre

460

Cinque Terre

0

ಸಂಬಂಧಿತ ಸುದ್ದಿ