ಧಾರವಾಡ : ರಾಯಾಪುರದಲ್ಲಿರುವ ಎಸ್ ಜೆ ಎಂ ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ವಿದ್ಯಾರ್ಥಿ ಒಕ್ಕೂಟ, ಐಕ್ಯೂಎಸಿ, ಎನ್ ಎಸ್ ಎಸ್ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ 71ನೆಯ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಚಾರ್ಯರಾದಂತಹ ಡಾ. ಪುಷ್ಪಾ ಬಸನಗೌಡರ ಅವರು ಉಪಸ್ಥಿತರಿದ್ದ ಎಲ್ಲರಿಗೂ 71ನೇ ಕರ್ನಾಟಕ ರಾಜ್ಯೋತ್ಸವದ ಶುಭ ಕೋರುತ್ತಾ, ಕನ್ನಡವು ಕೇವಲ ಒಂದು ಭಾಷೆಯಲ್ಲ; ಅದು ನಮ್ಮ ಬದುಕು, ಸಂಸ್ಕೃತಿ, ಪರಂಪರೆಯ ಪ್ರತೀಕ.
ದೇಶದ ಪ್ರಮುಖ ಭಾಷೆಗಳಲ್ಲಿ ಕನ್ನಡವು ಒಂದು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಪ್ರಸ್ತುತದಲ್ಲಿ ಕನ್ನಡದಲ್ಲಿ ಬರೆಯುವುದು, ಓದುವುದು, ಮಾತನಾಡುವುದು ಮತ್ತು ಕನ್ನಡದ ಸಾಹಿತ್ಯವನ್ನು ಇತರರಿಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಬೇಕು.
ಕನ್ನಡ ಭಾಷೆಯ ಉಳಿವು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕನ್ನಡ ಭಾಷೆ ನಮ್ಮ ಬದುಕಿನ ಭಾಷೆಯಾಗಲಿ. ಕನ್ನಡ ನಮ್ಮ ಮಾತೃಭಾಷೆ ಅಷ್ಟೇ ಅಲ್ಲ, ನಮ್ಮ ಸಂಸ್ಕೃತಿ ಮತ್ತು ನಮ್ಮ ಅಸ್ಮಿತೆಯ ಸಂಕೇತವಾಗಿದೆ. ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡದಲ್ಲಿ ಮಾತನಾಡಲು ಮತ್ತು ಬರೆಯಲು ಹೆಮ್ಮೆಪಡಬೇಕು. ನಾವೆಲ್ಲರೂ ಕನ್ನಡವನ್ನು ಪ್ರೀತಿಸೋಣ. ಕನ್ನಡ ನಮ್ಮ ಬದುಕಿನ ಭಾಷೆಯಾಗಲಿ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದಂತಹ ಡಾ. ಪುಷ್ಪಾ ಬಸನಗೌಡರವರ ಮಾರ್ಗದರ್ಶನದಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿಗಳು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಚಿತ್ರಪುಟಗಳನ್ನು ತಯಾರಿಸಿ ಪ್ರದರ್ಶಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಚಿತ್ರಪುಟ ತಯಾರಿಸಿ ವಿಜೇತರಾದ ಬಿಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿ ಕುಮಾರಿ ಸುಮಾ ಶಿರುಂಡ ಪ್ರಥಮ ಸ್ಥಾನ, ಬಿಎ ಮೊದಲನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದಂತಹ ಅಶ್ವಿನಿ ಕುಬಿಹಾಳ ಎರಡನೇ ಸ್ಥಾನ ಹಾಗೂ ಗೀತಾ ಚಿಕ್ಕಮಠ ಮೂರನೇ ಸ್ಥಾನ ಪಡೆದರು. ಇವರಿಗೆ ಪ್ರಾಚಾರ್ಯರು ತಾವೇ ಸ್ವಯಂ ಪ್ರೇರಣೆಯಿಂದ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದಂತಹ ಡಾ. ರಮೇಶ್.ಸಿ. ಅವರು ಕನ್ನಡ ಭಾಷೆಯ ಪ್ರಸ್ತುತ ಸ್ಥಿತಿಗತಿಯ ಕುರಿತು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಕನ್ನಡ ಭಾಷೆಯು ಅನೇಕ ಸವಾಲುಗಳನ್ನು ಎದುರಿಸುತ್ತದೆ. ಬಂದಂತಹ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ವಿದ್ಯಾರ್ಥಿಗಳು ಕನ್ನಡ ಭಾಷೆ ಕುರಿತು ಪ್ರೀತಿ, ಅಭಿಮಾನ ಬೆಳೆಸಿಕೊಳ್ಳುವುದರ ಜೊತೆಗೆ ಕನ್ನಡ ಭಾಷೆಯು ನಮ್ಮೆಲ್ಲರ ಬದುಕಿನ ಭಾಷೆಯ ಜೊತೆಗೆ, ಉದ್ಯೋಗದ ಭಾಷೆಯು ಕೂಡ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಮಹಾವಿದ್ಯಾಲಯದ ಪ್ರಾಚಾರ್ಯರಾದಂತಹ ಡಾ. ಪುಷ್ಪಾ ಬಸನಗೌಡರ ಹಾಗೂ ಸಮಸ್ತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪುಷ್ಪ ಸಮರ್ಪಿಸಿದರು.
ವಿದ್ಯಾರ್ಥಿ ಶಿವಕುಮಾರ ಪ್ರಾರ್ಥಿಸಿದರು. ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷರಾದಂತಹ ಪ್ರೊ. ಕೆ.ಎಸ್. ಮೇಲ್ಮಾಳಗಿ ಸರ್ವರನ್ನು ಸ್ವಾಗತಿಸಿದರು. ಕರ್ನಾಟಕ ಏಕೀಕರಣದ ಹೋರಾಟದ ಹಾದಿ ಕುರಿತ ಚಿತ್ರಪುಟದ ಕುರಿತಾಗಿ ವಿದ್ಯಾರ್ಥಿನಿ ಸುಮಾ ಶಿರುಂಡ ಮಾತನಾಡಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ. ಛಾಯಾ ಹುಬ್ಬಳ್ಳಿ ಹಾಗೂ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದಂತಹ ಡಾ. ತೇಜಸ್ವಿನಿ ಅರಳಿಕಟ್ಟಿ ಉಪಸ್ಥಿತರಿದ್ದರು.
ಪ್ರೊ. ಜೆ.ಪಿ. ಯಂಡಿಗೇರಿ, ಪ್ರೊ. ಜಿ.ಸಿ. ಕಡ್ಡಿಪುಡಿ ಹಾಗೂ ಪ್ರೊ. ಎಮ್.ಬಿ. ಅಳಗವಾಡಿಯವರು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಚಿತ್ರಪುಟ ತಯಾರಿಕೆ ಸ್ಪರ್ಧೆಯ ನಿರ್ಣಾಯಕರಾಗಿದ್ದರು.
ಪ್ರಧಾನ ಕಾರ್ಯದರ್ಶಿ ಕುಮಾರಿ ರೇಣುಕಾ ಗಾಣಿಗೇರ್ ವಂದಿಸಿದರು. ಕುಮಾರಿ ರಾಜೇಶ್ವರಿ ಸುಳ್ಳದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
02/11/2026 07:53 pm