ಮಂಗಳೂರು: ಕೇವಲ 8 ತಿಂಗಳ ಹಸುಗೂಸಿನ ಕಣ್ಣಿನ ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಿರುವ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು, ಮಗುವಿನ ಕಣ್ಣನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವ ಅಪಾಯವನ್ನು ತಪ್ಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂಟ್ರಾ-ಆರ್ಟೀರಿಯಲ್ ಕೀಮೋಥೆರಪಿ (IAC) ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಇಂತಹ ಸಂಕೀರ್ಣ ಚಿಕಿತ್ಸೆಗೆ ಹಿಂದೆ ಬೆಂಗಳೂರು, ಮುಂಬೈನಂತಹ ಮಹಾನಗರಗಳಿಗೆ ತೆರಳಬೇಕಾಗಿತ್ತು.
ರೆಟಿನೋಬ್ಲಾಸ್ಟೊಮಾ ಸಾಮಾನ್ಯವಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ಕಣ್ಣಿನ ರೆಟಿನಾ (ದೃಷ್ಟಿಪಟಲ) ಭಾಗದಲ್ಲಿ ಕಾಣಿಸಿಕೊಳ್ಳುವ ಗಂಭೀರ ಕ್ಯಾನ್ಸರ್. ರೋಗ ಉಲ್ಬಣಿಸಿದಾಗ ಕಣ್ಣು ತೆಗೆಯುವುದೊಂದೇ ದಾರಿಯಾಗಿತ್ತು. ಆದರೆ ಈ ಹೊಸ ಮೈಕ್ರೋ-ಇಂಟರ್ವೆನ್ಷನ್ ವಿಧಾನದಲ್ಲಿ, ಮಗುವಿನ ರಕ್ತನಾಳದ ಮೂಲಕ ಅತೀ ಸೂಕ್ಷ್ಮ ನಳಿಕೆಯನ್ನು (ಕ್ಯಾಥೆಟರ್) ಕಣ್ಣಿನ ಗಡ್ಡೆಗೆ ರಕ್ತ ಸರಬರಾಜು ಮಾಡುವ ಪುಟ್ಟ ನಾಳದವರೆಗೆ ಕೊಂಡೊಯ್ಯಲಾಗುತ್ತದೆ. ಬಳಿಕ ನೇರವಾಗಿ ಗಡ್ಡೆಗೆ ಮಾತ್ರ ಗರಿಷ್ಠ ಪ್ರಮಾಣದ ಕೀಮೋ ಔಷಧಿ ನೀಡಲಾಗುತ್ತದೆ. ಇದರಿಂದ ಇಡೀ ದೇಹಕ್ಕೆ ಕೀಮೋಥೆರಪಿಯ ಅಡ್ಡಪರಿಣಾಮಗಳು ತಟ್ಟುವುದಿಲ್ಲ ಮತ್ತು ಕಣ್ಣು ಕಳೆದುಕೊಳ್ಳುವ ಅಪಾಯವೂ ತಪ್ಪುತ್ತದೆ.
ಫಾದರ್ ಮುಲ್ಲರ್ ಆಸ್ಪತ್ರೆಯ ಇಂಟರ್ವೆನ್ಷನಲ್ ರೇಡಿಯಾಲಜಿ ವಿಭಾಗದಲ್ಲಿರುವ ಸುಧಾರಿತ ‘ಫಿಲಿಪ್ಸ್ ಅಜುರಿಯನ್ ಬೈಪ್ಲೇನ್ ಕ್ಯಾಥ್ ಲ್ಯಾಬ್’ ಸೌಲಭ್ಯವು ಈ ಸಂಕೀರ್ಣ ಕಾರ್ಯಕ್ಕೆ ನೆರವಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲು ಎನ್ನಲಾದ ಈ ಯಂತ್ರದಲ್ಲಿನ 3D ಆಂಜಿಯೋಗ್ರಫಿ ಹಾಗೂ 3D ನ್ಯಾವಿಗೇಶನ್ ತಂತ್ರಜ್ಞಾನದ ಮೂಲಕ ವೈದ್ಯರು ಕಣ್ಣಿನ ಸೂಕ್ಷ್ಮಾತಿಸೂಕ್ಷ್ಮ ನರಗಳನ್ನು ಪರದೆಯ ಮೇಲೆ ನಿಖರವಾಗಿ ವೀಕ್ಷಿಸಿ ಚಿಕಿತ್ಸೆ ಪೂರೈಸಿದ್ದಾರೆ.
ಮಗುವಿಗೆ ಎರಡೂ ಕಣ್ಣುಗಳಲ್ಲಿ ಸಮಸ್ಯೆಯಿದ್ದ ಕಾರಣ, ಕೆಎಂಸಿ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟೊ-ಆಂಕಾಲಜಿಸ್ಟ್ ಡಾ. ಹರ್ಷ ಪ್ರಸಾದ್ ಅವರು ಪ್ರಾಥಮಿಕ ಸಿಸ್ಟಮಿಕ್ ಕೀಮೋ ನೀಡಿದ್ದರು. ಬಳಿಕ ಫಾದರ್ ಮುಲ್ಲರ್ ಆಸ್ಪತ್ರೆಯ ನೇತ್ರತಜ್ಞ ಪ್ರೊ. ಡಾ. ಶ್ರೀಪತಿ ಕಾಮತ್ ಒಂದು ಕಣ್ಣಿನ ಗಡ್ಡೆಯನ್ನು ಯಶಸ್ವಿಯಾಗಿ ಗುಣಪಡಿಸಿದ್ದರು.
ಮತ್ತೊಂದು ಕಣ್ಣಿನ ಗಡ್ಡೆ ದೊಡ್ಡದಾಗಿದ್ದರಿಂದ ಅಕ್ಟೋಬರ್ ಎರಡನೇ ವಾರದಲ್ಲಿ ಇಂಟರ್ವೆನ್ಷನಲ್ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಲೆನನ್ ಡಿಸೋಜ, ಡಾ. ಮಂದೀಪ್ ಸಾಗರ್ ಮತ್ತು ಡಾ. ಶ್ರೀಪತಿ ಕಾಮತ್ ತಂಡವು 'ಇಂಟ್ರಾ-ಆರ್ಟೀರಿಯಲ್ ಕೀಮೋಥೆರಪಿ' ನೆರವೇರಿಸಿತು. ಅರವಳಿಕೆ ತಜ್ಞ ಡಾ. ಅನಂತ್ ಸೋಮಯಾಜಿ ಅರಿವಳಿಕೆ ನಿರ್ವಹಿಸಿದರು. ಇದಾದ ಎರಡು ವಾರಗಳ ಬಳಿಕ ಪ್ರೊ. ಡಾ. ಶ್ರೀಪತಿ ಕಾಮತ್ ಹಾಗೂ ಪ್ರೊ. ಡಾ. ಸುನಯನಾ ಭಟ್ ನೇತೃತ್ವದಲ್ಲಿ ಕಣ್ಣಿನೊಳಗೆ ನೇರ ಕೀಮೋ (ಇಂಟ್ರಾವಿಟ್ರಿಯಲ್ ಕೀಮೋ) ನೀಡಲಾಯಿತು. ಅಕ್ಟೋಬರ್ ಕೊನೆಯ ವಾರದ ತಪಾಸಣೆ ವೇಳೆ ಮಗುವಿನ ಕಣ್ಣಿನಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು, ಮಗು ಅಪಾಯದಿಂದ ಪಾರಾಗಿದೆ.
ಈ ಅಪರೂಪದ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ ವೈದ್ಯರ ತಂಡವನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ. ಫಾಸ್ಟಿನ್ ಲೂಕಾಸ್ ಲೋಬೊ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.
Kshetra Samachara
03/11/2026 07:31 pm