ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ವೈಯಕ್ತಿಕ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ

ಧಾರವಾಡ : ವೈಯಕ್ತಿಕ ವಿಷಯಗಳಾದ ಹಣಕಾಸು ವ್ಯವಹಾರ, ಕೌಟುಂಬಿಕ ವಿಷಯಗಳ ಬಗ್ಗೆ ವಾಟ್ಸಪ್, ಫೇಸ್ ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದೆಂದು ಧಾರವಾಡ ಸೈಬರ್ ಕ್ರೈಮ್ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಡಾ.ಶಿವರಾಜ ಕಟಕಭಾವಿ ಸಲಹೆ ನೀಡಿದರು.

ನಗರದ ಕವಿವಿಯ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜ್ ವತಿಯಿಂದ ಹಮ್ಮಿಕೊಂಡ "ಸೈಬರ್ ಬೆಳೆಯುತ್ತಿರುವ ಆಯಾಮಗಳು ಮತ್ತು ಸವಾಲುಗಳು" ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಕೃತಕ ಬುದ್ದಿಮತ್ತೆ ಉಪಯೋಗಿಸಿ ಅಪರಾಧ ಮಾಡುವ ಒಂದು ವರ್ಗವೇ ಸೃಷ್ಠಿಯಾಗಿದೆ. ಅಪರಾಧಿಗಳ ಪತ್ತೆ ಸುಲಭದ ಮಾತಲ್ಲ, ಏಕೆಂದರೆ ಕೇವಲ ಇದು ನಮ್ಮ ರಾಜ್ಯದ ವಿಷಯ ಮಾತ್ರವಲ್ಲದೇ ವಿದೇಶಗಳಿಂದಲೂ ಇಂತಹ ಅಪರಾಧದ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ. ಆದ್ದರಿಂದ ಸಾಮಾನ್ಯ ಜನರಿಗೆ ಇಂತಹ ಅಪರಾಧಗಳ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು.

ಗೌರವ ಅತಿಥಿಯಾಗಿ ಧಾರವಾಡದ ಸಿಐಡಿ ಪೊಲೀಸ್ ನಿರೀಕ್ಷಕ ಎಲ್.ಬಿ.ಅಗ್ನಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಭೌತಿಕ ಅಪರಾಧಗಳಿಗಿಂತ ಸೈಬರ್ ಅಪರಾಧಗಳೇ ಜಾಸ್ತಿಯಾಗಿವೆ. ಆದುದರಿಂದ ಕಾನೂನು ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ, ಸೈಬರ್, ಭೌದ್ಧಿಕ ಸ್ವತ್ತಿನ ಕಾನೂನುಗಳ ಬಗ್ಗೆ ಅಧ್ಯಯನ ಮಾಡಬೇಕಾಗಿರುವುದು ಅಗತ್ಯವಾಗಿದೆ ಎಂದರಲ್ಲದೇ ವಿವಿಧ ಸೈಬರ್ ಪ್ರಕರಣಗಳ ಬಗ್ಗೆ ಸವಿವರವಾಗಿ ಉದಾಹರಣೆ ಮೂಲಕ ವಿವರಿಸಿದರು.

ಧಾರವಾಡದ ಸೈಬರ್ ಅಪರಾಧದ ಪೊಲೀಸ್ ಅಧಿಕಾರಿ, ಶಿವಾನಂದ ತಿಮ್ಮಾಪೂರ ಮಾತನಾಡಿ ಮೊಬೈಲ್ ಬಳಸುವಾಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿ ಸಾಧ್ಯವಾದಷ್ಟು ಗೌಪ್ಯತೆ ವಹಿಸುವಂತೆ ಸಲಹೆ ನೀಡಿದರು.

ಹಿರಿಯ ವಕೀಲ ಹಾಗೂ ಅತಿಥಿ ಉಪನ್ಯಾಸಕರಾದ ಕೆ.ಎಸ್.ಕೋರಿಶೆಟ್ಟರ ಅವರು ತಮ್ಮ ವೃತ್ತಿ ಅನುಭವದಲ್ಲಿ ಕಂಡಂತಹ ಹಲವಾರು ಸೈಬರ್ ಅಪರಾಧಗಳ ಕುರಿತು ಮತ್ತು ಅಂತಹ ಸಮಸ್ಯೆಗಳನ್ನು ಪರಿಹರಿಸಿರುವ ಕುರಿತು ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಪ್ರಾಚಾರ್ಯರಾದ ಡಾ.ಮಂಜುಳಾ ಎಸ್.ಆರ್ ಅವರು ಮಾತನಾಡಿ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡ ಈ ವಿಶೇಷ ಉಪನ್ಯಾಸ ಕಾರ್ಯಕ್ರಮವು ಬಹಳ ಪರಿಣಾಮಕಾರಿ ಹಾಗೂ ಮಾಹಿತಿ ಭರಿತವಾಗಿತ್ತು. ಕಾರಣ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದರು.

ಕಾರ್ಯಕ್ರಮದ ಆಯೋಜಕರು, ಕಾಲೇಜ್ ಯೂನಿಯನ್ ಮತ್ತು ಜಮಖಾನಾ ಅಧ್ಯಕ್ಷರಾದ ಪ್ರೊ.ಡಾ.ಶಶಿರೇಖಾ ಮಾಳಗಿ ಅವರು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಚೇತನ ಬಡಿಗೇರ, ಕಾವ್ಯಾ ಎಂ.ದೊಡ್ಡಮನಿ, ಬಸವರಾಜ ಆರಾಣಿ ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Edited By : PublicNext Desk
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/06/2025 04:11 pm

Cinque Terre

16.43 K

Cinque Terre

0

ಸಂಬಂಧಿತ ಸುದ್ದಿ