ನವಲಗುಂದ : ಸುದೀರ್ಘವಾಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವುದು ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆಯ ಸಾರ್ಥಕತೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಾನಂದ ಮಲ್ಲಾಡ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವಂತಹ ಸರಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಪ್ರಧಾನ ಗುರು ಮಾತೆ ಆರ್.ಎನ್ ಹಾಲಿಗೇರಿಯವರ ಸೇವಾ ನಿವೃತ್ತಿ ಪ್ರಯುಕ್ತ ಅಭಿನಂದನಾ ಸಮಾರಂಭ ಹಾಗೂ
ಸನ್ 1998-1999ನೇ ಸಾಲಿನ 7 ನೇ ತರಗತಿಯ ಹಳೆಯ ವಿದ್ಯಾರ್ಥಿನಿಯರಿಂದ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇದು ಗುರು ಶಿಷ್ಯರ ಸಂಗಮದ ಕಾರ್ಯಕ್ರಮ, ವಿದ್ಯಾರ್ಥಿಗಳು ಗುರುಗಳಿಗೆ ಗುಲಾಮರಾಗಿ ವಿದ್ಯೆಯನ್ನು ಪಡೆದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ, ಹಳೆಯ ವಿದ್ಯಾರ್ಥಿನಿಯರು ಸೇರಿಕೊಂಡು ಮಕ್ಕಳಿಗೆ ಶಾಲಾ ಪರಿಕರ ವಿತರಣೆಯ ಮಾಡಿದ್ದು ಮಾದರಿಯ ಕೆಲಸವಾಗಿದೆ ಎಂದರು.
ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಮಾತನಾಡಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರು ಸಹ ಅಕ್ಷರ ಕಲಿಸಿದ ಗುರುಗಳನ್ನು ನೆನೆಯಬೇಕು, ಸೇವಾ ನಿವೃತ್ತಿ ಹೊಂದಿರುವಂತಹ ಹಾಲಿಗೇರಿಯವರು ಸದಾ ಮಕ್ಕಳ ಅತ್ಯುತ್ತಮ ಶಿಕ್ಷಕರಾಗಿದ್ದರು, ಸದಾ ಲವಲವಿಕೆಯಿಂದ ಕ್ರಿಯಾಶಿಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.
ಎ. ಬಿ ಕೊಪ್ಪದ ಮಾತನಾಡಿ ನಮ್ಮ ದೇಶ ಗುರು ಪರಂಪರೆಯನ್ನು ಹೊಂದಿರುವಂತಹ ದೇಶವಾಗಿದೆ, ವಿದ್ಯೆ ಕೊಟ್ಟ ಗುರುಗಳನ್ನು ಯಾವತ್ತು ಮರೆಯಬಾರದು, ಇವತ್ತು ಹಾಲಿಗೇರಿ ಗುರು ಮಾತೆ ವೃತ್ತಿಯಿಂದ ನಿವೃತ್ತರಾಗಿದ್ದಾರೆ ಹೊರತು ಪ್ರವೃತ್ತಿ ಯಿಂದ ಅಲ್ಲಾ, ಅವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿನಿಯರಿಂದ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು.
Kshetra Samachara
28/06/2025 05:04 pm