ಚಿಕ್ಕೋಡಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣಾ ಕಾವಿನಲ್ಲಿ ಹೊಸ ತಿರುವು ಸಿಕ್ಕಿದೆ. ಮಾಜಿ ಸಂಸದ ರಮೇಶ್ ಕತ್ತಿ ಪಿಕೆಪಿಎಸ್ ನಿರ್ದೇಶಕರನ್ನು ಹೈಜಾಕ್ ಮಾಡಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ಪ್ರಕಾರ, ಹುಕ್ಕೇರಿ ತಾಲೂಕು ಪಾಶ್ಚಾಪುರ ಗ್ರಾಮದ ಆರು ಮಂದಿ ಪಿಕೆಪಿಎಸ್ ನಿರ್ದೇಶಕರು ಅಲ್ಲಪ್ಪ ಹಿರೇಕೊಡಿ, ದೂದಪ್ಪ ಶಿಂತ್ರೆ, ರಫೀಕ್ ಮದಿಹಳ್ಳಿ, ವಿಲಾಸ್ ಅನ್ವೇಕರ್, ಶಿವಲೀಲಾ ವಸ್ತ್ರದ್ ಮತ್ತು ಶ್ರೀಶೈಲ ಪಟ್ಟಣಶೆಟ್ಟಿ ಕತ್ತಿ ಅವರ ಕಾರ್ಖಾನೆಯಲ್ಲಿ ಒತ್ತಾಯಪೂರ್ವಕವಾಗಿ ಇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಕುಟುಂಬಸ್ಥರ ಮನವಿ ಮೇರೆಗೆ ಯಮಕನಮರಡಿ ಪೊಲೀಸರು ತಕ್ಷಣ ಕಾರ್ಖಾನೆಗೆ ಭೇಟಿ ನೀಡಿ ಸದಸ್ಯರನ್ನು ಹೊರತೆಗೆದಿದ್ದಾರೆ. ಆದರೆ ಸದಸ್ಯರು ತಾವೇ ಕಾರ್ಖಾನೆಗೆ ಬಂದಿದ್ದೇವೆಂದು ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಇನ್ನಷ್ಟು ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ರಮೇಶ್ ಕತ್ತಿ ನಡುವೆ ವಾಗ್ವಾದವೂ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೊನೆಗೂ ಪೊಲೀಸರು ಸದಸ್ಯರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮತ್ತು ಮಾಜಿ ಸಂಸದ ರಮೇಶ್ ಕತ್ತಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಹೈಜಾಕ್ ಡ್ರಾಮಾ ರಾಜಕೀಯ ಹೋರಾಟಕ್ಕೆ ಮತ್ತಷ್ಟು ಬಿರುಸು ನೀಡಿದೆ.
PublicNext
08/09/2025 09:25 am