ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕಾಫಿನಾಡಲ್ಲಿ ಪತ್ತೆಯಾಯ್ತು ಚಿನ್ನದ ನಿಕ್ಷೇಪ.! ಕೆಜಿಎಫ್ ನಂತರ ಕರ್ನಾಟಕಕ್ಕೆ ಮತ್ತೊಂದು ಚಿನ್ನದ ಗಣಿ?

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂಬ ವರದಿ ಖನಿಜೋದ್ಯಮ ವಲಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ. ಸುಮಾರು 10,100 ಎಕರೆ ವ್ಯಾಪ್ತಿಯ ಭೂಮಿಯಲ್ಲಿ ಚಿನ್ನದ ನಿಕ್ಷೇಪಗಳಿರುವ ಸುಳಿವುಗಳು ಸಿಕ್ಕಿವೆ ಎಂದು ಬೆಂಗಳೂರಿನ ಔರಮ್ ಜಿಯೋ ಎಕ್ಸ್ ಪ್ಲೋರೇಷನ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಕಂಪನಿಯ ಪ್ರಾಥಮಿಕ ಅಧ್ಯಯನ ಪ್ರಕಾರ, ಈ ಪ್ರದೇಶದಲ್ಲಿ ಚಿನ್ನದ ಅಂಶವಿರುವುದು ದೃಢಪಟ್ಟಿದೆ. ಆದರೆ, ಪ್ರತಿ ಟನ್ ಮಣ್ಣಿನಲ್ಲಿ ಎಷ್ಟು ಗ್ರಾಂ ಚಿನ್ನ ದೊರೆಯಬಹುದು ಎಂಬುದನ್ನು ತಿಳಿಯಲು ಕನಿಷ್ಠ 1,000 ಕಡೆಗಳಲ್ಲಿ ಡ್ರಿಲ್ಲಿಂಗ್ ಅಥವಾ ಬೋರ್‌ವೆಲ್ ಪರೀಕ್ಷೆ ನಡೆಸಬೇಕಿದೆ ಎಂದು ಕಂಪನಿ ಮನವಿ ಮಾಡಿದೆ.ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ಕೋಲಾರದ ಕೆಜಿಎಫ್ ಮತ್ತು ರಾಯಚೂರಿನ ಹಟ್ಟಿ ಗಣಿಗಳ ನಂತರ ಕರ್ನಾಟಕದಲ್ಲಿ ಮತ್ತೊಂದು ಬೃಹತ್ ಚಿನ್ನದ ಗಣಿ ಆರಂಭವಾಗುವ ಸಾಧ್ಯತೆ ಇದೆ. ಆದರೆ ಇದಕ್ಕೆ ಪರಿಸರ ಆಸಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟಗಳನ್ನು ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಹಾನಿಗೊಳಪಡಿಸಿರುವುದರಿಂದ ಪರಿಸರ ತಜ್ಞರು ಈಗಲೇ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಮಲೆನಾಡಿನಲ್ಲಿ ಭೂಕುಸಿತ ಮತ್ತು ಅರಣ್ಯ ನಾಶದ ಘಟನೆಗಳು ಹೆಚ್ಚಿರುವುದನ್ನು ಉಲ್ಲೇಖಿಸುತ್ತಾ, ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಪರಿಸರ ಹಾನಿ ಮತ್ತು ಜೀವ ವೈವಿಧ್ಯದ ನಾಶ ಅನಿವಾರ್ಯವಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಈಗ ಗುರುತಿಸಿರುವ ಭೂಮಿಯಲ್ಲಿ 5,600 ಎಕರೆ ಅರಣ್ಯ ಪ್ರದೇಶ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಸೇರಿದ್ದು, ಅಲ್ಲಿ ಅಪರೂಪದ ಪ್ರಾಣಿ-ಪಕ್ಷಿಗಳು ಆಶ್ರಯ ಪಡೆದಿವೆ. ಉಳಿದ 3,600 ಎಕರೆ ಕೃಷಿ ಭೂಮಿ ಕಲ್ಲು ಬಂಡೆಗಳ ಪ್ರದೇಶವಾಗಿದ್ದು, ಅಲ್ಲಿ ಸಾವಿರಾರು ಕುಟುಂಬಗಳು ಜೀವನ ಕಟ್ಟಿಕೊಂಡಿವೆ. ಕೇಂದ್ರ ಖನಿಜ ಇಲಾಖೆಯಿಂದ ಪ್ರಾಥಮಿಕ ಸಂಶೋಧನೆ ಹಾಗೂ ಸಣ್ಣ ಪ್ರಮಾಣದ ಉತ್ಪಾದನೆಗೆ ಅನುಮತಿ ದೊರೆತಿದೆ. ಆದರೆ, ಅರಣ್ಯ ಪ್ರದೇಶದಲ್ಲಿ ಡ್ರಿಲ್ಲಿಂಗ್‌ಗೆ ಅವಕಾಶ ನೀಡುವ ವಿಷಯದಲ್ಲಿ ಕೇಂದ್ರ ಪರಿಸರ ಇಲಾಖೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಒಟ್ಟಾರೆ ಕಾಫಿನಾಡು ಚಿಕ್ಕಮಗಳೂರಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವುದು ಕುತೂಹಲ ಸೃಷ್ಟಿಸಿದ್ದರೆ. ಚಿನ್ನದ ಆಕರ್ಷಣೆ ಮತ್ತು ಪಶ್ಚಿಮ ಘಟ್ಟದ ಅಮೂಲ್ಯ ಪರಿಸರದ ಸಂರಕ್ಷಣೆ ನಡುವಿನ ಸಮತೋಲನ ಕಾಪಾಡಿಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಡ್ಯಾನಿ, ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು

Edited By : Suman K
PublicNext

PublicNext

09/09/2025 07:08 pm

Cinque Terre

9.77 K

Cinque Terre

0

ಸಂಬಂಧಿತ ಸುದ್ದಿ