ಮಂಗಳೂರಿನಲ್ಲಿ ಸೈಬರ್ ವಂಚನೆ ಜಾಲ ಸಕ್ರಿಯವಾಗಿದ್ದು, ನಕಲಿ ಸಂದೇಶಗಳ ಮೂಲಕ ಅಮಾಯಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದೆ. ಇತ್ತೀಚೆಗೆ, ವಾಹನ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಸುವಂತೆ ಬಂದ ನಕಲಿ ಸಂದೇಶವನ್ನು ನಂಬಿ ಎಪಿಕೆ ಲಿಂಕ್‌ಗೆ ಕ್ಲಿಕ್ ಮಾಡಿದ ಇಬ್ಬರು ವಾಹನ ಮಾಲೀಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 1.43 ಲಕ್ಷ ರೂ. ಮತ್ತು 5.85 ಲಕ್ಷ ರೂ. ವಂಚನೆ ನಡೆದಿದ್ದು, ಸುರತ್ಕಲ್ ಹಾಗೂ ಮಂಗಳೂರು ನಗರದ ಪಾಂಡೇಶ್ವರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 7ರಂದು ಸಂಜೆ ಒಬ್ಬ ವ್ಯಕ್ತಿಯ ವಾಟ್ಸ್ಆ್ಯಪ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ "mpari.apk, ಟ್ರಾಫಿಕ್ ವೆಹಿಕಲ್ ನೋಟಿಸ್" ಎಂದು ಉಲ್ಲೇಖಿಸಲಾಗಿತ್ತು.
'ಎಂ ಪರಿ' ವಾಹನ ಲೋಗೋ ಹಾಗೂ 'ಎಂ ಪರಿವಾಹನ್' ಎಂಬ ಹೆಸರನ್ನು ಬಳಸಲಾಗಿತ್ತು. ವಾಹನದ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಚಲನ್ ಪಾವತಿಸಲು ಹಾಗೂ ರಸ್ತೆ ಸಂಚಾರ ನಿಯಮ ಉಲ್ಲಂಘನೆಯ ಫೋಟೋ, ವಿಡಿಯೋಗಳನ್ನು ನೋಡಲು "mpari.apk" ಡೌನ್‌ಲೋಡ್ ಮಾಡುವಂತೆ ಸಂದೇಶದಲ್ಲಿ ತಿಳಿಸಲಾಗಿತ್ತು. ಅದನ್ನು ಡೌನ್‌ಲೋಡ್ ಮಾಡಿದಾಗ, ಅವರ ಮೊಬೈಲ್‌ಗೆ ಹಲವು ಒಟಿಪಿಗಳು ಬಂದಿವೆ.
ಈ ಎಲ್ಲ ಒಟಿಪಿಗಳು ಅಪರಿಚಿತ ನಂಬರ್‌ಗಳಿಂದ ಹ್ಯಾಕಿಂಗ್ ಮೂಲಕ ಫಾರ್ವರ್ಡ್ ಆಗಿದ್ದು, ಈ ವೇಳೆ ಅವರ ವಿವಿಧ ಕ್ರೆಡಿಟ್ ಕಾರ್ಡ್‌ಗಳಿಂದ ಒಟ್ಟು 5,85,084 ರೂ.ಗಳನ್ನು ಶಾಪಿಂಗ್ ಹಾಗೂ ಇನ್ನಿತರ ವ್ಯವಹಾರಗಳಿಗೆ ದುರ್ಬಳಕೆ ಮಾಡಲಾಗಿದೆ.
ಹಣ ಕಳೆದುಕೊಂಡ ವ್ಯಕ್ತಿ ಗೋವಾದಲ್ಲಿದ್ದಾಗ ಈ ಘಟನೆ ನಡೆದಿದ್ದು, ಮಂಗಳೂರಿಗೆ ಬಂದ ಬಳಿಕ ತಮ್ಮ ಫೋನ್ ಹ್ಯಾಕ್ ಆಗಿರುವ ಬಗ್ಗೆ ತಿಳಿದು, ಆ್ಯಪ್ ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ಅವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಡಿಸೆಂಬರ್ 4ರಂದು ಮತ್ತೊಬ್ಬ ವ್ಯಕ್ತಿಗೆ ಇದೇ ರೀತಿಯ ಸಂದೇಶ ಬಂದಿತ್ತು. ಅವರು ಅದರಲ್ಲಿ ಸೂಚಿಸಿದಂತೆ ಆರ್‌ಟಿಒ ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಿದ್ದರು. ಬಳಿಕ ಅಂದೇ ಅದನ್ನು ಡಿಲೀಟ್ ಮಾಡಿದ್ದರೂ, ಡಿಸೆಂಬರ್ 16ರಂದು ಅವರ ಖಾತೆಯಿಂದ 99,000 ರೂ. ಹಾಗೂ 44,000 ರೂ. ಕಡಿತಗೊಂಡಿದೆ.
ಈ ಬಗ್ಗೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ, ಅರವಿಂದ್ ಕೆ. ಮತ್ತು ಶ್ರೀರಾಮ್ ಎಂಬವರ ಯುಪಿಐ-ಐಡಿಗೆ ಹಣ ವರ್ಗಾವಣೆಯಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
20/12/2025 05:05 pm