ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಗುಜರಿ ವಸ್ತು ಬಳಸಿ ಪೆಟ್ರೋಲ್ ಚಾಲಿತ ಎಲೆಕ್ಟ್ರಿಕಲ್ ಹೈಬ್ರಿಡ್ ಟ್ರ್ಯಾಕ್ಟರ್ ನಿರ್ಮಾಣ!

ಚಳ್ಳಕೆರೆ: ನಗರದ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ ಆಟೋ ಮೊಬೈಲ್ ವಿಭಾಗದ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಸಹಕಾರದೊಂದಿಗೆ ಹಳೆಯ ವಸ್ತುಗಳೊಂದಿಗೆ ಪೆಟ್ರೋಲ್ ಚಾಲಿತ ಎಲೆಕ್ಟ್ರಿಕಲ್ ಹೊಂದಿರುವ ಹೈಬ್ರಿಡ್ ಟ್ರ್ಯಾಕ್ಟರ್ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಶೈಕ್ಷಣಿಕವಾಗಿ ಹಿಂದುಳಿದಿರುವ ಪಟ್ಟಿಯಲ್ಲಿರುವ ಚಳ್ಳಕೆರೆಗೆ ಸ್ವತಃ ಎಂಜಿನಿಯರ್ ಆಗಿರುವ ಶಾಸಕ ಟಿ.ರಘುಮೂರ್ತಿ ಅವರಿಂದ ತಾಲೂಕು ಕೇಂದ್ರದಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗಿದ್ದರಿಂದ, ಈ ಭಾಗದ ಮಕ್ಕಳಿಗೆ ವರದಾನವಾಗಿದೆ. ಕಾರಣ ರಾಜ್ಯದಲ್ಲಿನ 17 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಚಳ್ಳಕೆರೆಯಲ್ಲಿ ಮಾತ್ರ ಆಟೋ ಮೊಬೈಲ್ ವಿಭಾಗವಿದ್ದು, ಇಲ್ಲಿನ ವಿದ್ಯಾರ್ಥಿಗಳು ಕೇವಲ 1.30 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಬ್ರಿಡ್ ಟ್ರ್ಯಾಕ್ಟರ್ ತಯಾರಿಸಿರುವುದು ವಿಶೇಷವಾಗಿದೆ.

ಚಳ್ಳಕೆರೆ ಕಾಲೇಜಿನಿಂದ ಆಟೋ ಮೊಬೈಲ್ ವಿಭಾಗದಿಂದ ಕಳೆದ ವರ್ಷವೇ ಹೊರ ಬಂದಿರುವ ಮೊದಲ ಬ್ಯಾಚ್‌ನಲ್ಲೇ 1,2 ಮತ್ತು 3ನೇ ರ‍್ಯಾಂಕ್‌ನೊಂದಿಗೆ ಗಮನ ಸೆಳೆದಿತ್ತು. ಪ್ರಸ್ತುತ 2ನೇ ಬ್ಯಾಚ್‌ನವರು ಹೈಬ್ರಿಡ್ ಟ್ರ್ಯಾಕ್ಟರ್ ತಯಾರಿಸಿದ್ದಾರೆ.

ರ‍್ಯಾಂಕ್ ಮತ್ತು ಹೊಸ ಅವಿಷ್ಕಾರ ಕಂಡು ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಆಟೋ ಮೊಬೈಲ್‌ಗೆ ಇನ್ನೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಂಡು ದಾಖಲಾಗುವ ಸಾಧ್ಯತೆಯಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಬೇನಾಳ್ ತಿಳಿಸಿದ್ದಾರೆ.

ಹೈಬ್ರಿಡ್ ಟ್ರ್ಯಾಕ್ಟರ್ ತಯಾರಿಸಿದ ಬಳಿಕ ಕಾಲೇಜಿನಲ್ಲಿ ಸುತ್ತು ಹಾಕಿ ಪರೀಕ್ಷೆ ನಡೆಸಿ ಯಶಸ್ವಿಯಾದ ಬಳಿಕ ನಗರದ ತುಂಬಾ ಸಂಚರಿಸಿದ್ದಲ್ಲದೆ ಟ್ರ್ಯಾಕ್ಟರ್ ಶೋ ರೂಮ್ ಗಳಿಗೆ ವಿದ್ಯಾರ್ಥಿಗಳೇ ಚಾಲನೆ ಮಾಡಿಕೊಂಡು ಹೋಗಿ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದ್ದಾರೆ.

ಡಿಸೇಲ್ ಎಂಜಿನ್‌ಗೆ ಬ್ರೇಕ್: ಪ್ರಸ್ತುತ ದೇಶದಲ್ಲಿ ಡಿಸೇಲ್ ಮತ್ತು ಎಲೆಕ್ಟ್ರಿಕ್ ಹೈಬ್ರಿಡ್ ಟ್ರ್ಯಾಕ್ಟರ್‌ಗಳು ಚಾಲ್ತಿಯಲ್ಲಿದ್ದು, ಈ ಕಾಲೇಜಿನ ವಿದ್ಯಾರ್ಥಿಗಳು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಹೈಬ್ರಿಡ್ ಟ್ರ್ಯಾಕ್ಟರ್ ತಯಾರಿಸಿರುವುದು ವಿಶೇಷ. ಕಾರಣ ಡಿಸೇಲ್‌ನಿಂದ ಪರಿಸರ ಮಾಲಿನ್ಯವಾಗುತ್ತಿರುವುದರಿಂದ ಕೇಂದ್ರ ಸರಕಾರ ಡಿಸೇಲ್ ವಾಹನಗಳ ತಯಾರಿಕೆಗೆ ಕಡಿವಾಣ ಹಾಕುತ್ತಿದ್ದು, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುತ್ತಿದೆ.

ಇಲ್ಲಿನ ಆಟೋ ಮೊಬೈಲ್ ವಿಭಾಗದ ಎಚ್‌ಒಡಿ ಡಾ.ಲಕ್ಷ್ಮಿ ದೇವಮ್ಮ ಅವರ ಸಲಹೆಯಂತೆ ಪ್ರಾಧ್ಯಾಪಕ ಶಿವರಾಜ್‌ಕುಮಾರ್ ಮಾರ್ಗದರ್ಶನಲ್ಲಿ ವಿದ್ಯಾರ್ಥಿಗಳು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಹೈಬ್ರಿಡ್ ಟ್ರ್ಯಾಕ್ಟರ್ ತಯಾರಿಸಿರುವುದಲ್ಲದೆ ಬ್ಯಾಟರಿ ಖಾಲಿಯಾಗಿ ಪೆಟ್ರೋಲ್‌ನಲ್ಲಿ ಓಡುವಾಗ ಎಲೆಕ್ಟ್ರಿಕ್ ಬ್ಯಾಟರಿ ಚಾರ್ಜ್ ಆಗುವಂತೆ ರೂಪಿಸಿರುವ ಜತೆಗೆ ಜನರೇಟರ್ ಮತ್ತು ಮನೆ ವಿದ್ಯುತ್ ಬಳಕೆಗೆ ಯುಪಿಎಸ್ ಆಗಿ ಬಳಕೆ ಮಾಡಿಕೊಳ್ಳುವಂತೆ ರೂಪಿಸಿರುವುದು ವಿಶೇಷವಾಗಿದೆ.

ಟ್ರ್ಯಾಕ್ಟರ್ ತಯಾರಿಕೆ ಮಾರ್ಗದರ್ಶಕ ಪ್ರಾಧ್ಯಾಪಕ ಶಿವರಾಜ್‌ಕುಮಾರ್ ಈ ಕುರಿತು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Edited By : Manjunath H D
PublicNext

PublicNext

25/01/2026 05:26 pm

Cinque Terre

21.03 K

Cinque Terre

0

ಸಂಬಂಧಿತ ಸುದ್ದಿ