ಗುಂಡ್ಲುಪೇಟೆ : ದ್ವಿಚಕ್ರ ವಾಹನದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ. ಬಂಡೀಪುರ ಹುಲಿ ರಕ್ಷಿತಾರಣ್ಯದ ಕುಂದಕೆರೆ ವಲಯದ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬವರೇ ಚಿರತೆ ದಾಳಿಗೊಳಗಾಗಿದ್ದು ಮುಖ ಕೈ ಕಾಲುಗಳಿಗೆ ತೀವ್ರತರವಾದ ಗಾಯಗಳಾಗಿವೆ, ಅರಿಶಿನ ಕಾವಲಿಗೆ ಗುರುವಾರ ಸಂಜೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದೆ , ಬೈಕ್ ಸಮೇತ ಕೆಳಗುರುಳಿದ ರಾಜಶೇಖರ್ ಅವರ ಮೇಲೆ ಎರಗಿದೆ ತಕ್ಷಣ ಜೋರಾಗಿ ಹಾರ್ನ್ ಮಾಡಿದ ಕಾರಣ ಗಾಬರಿಗೊಂಡ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ.
ದಾಳಿಯಿಂದ ಪಾರಾದ ರಾಜಶೇಖರ್ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ, ಘಟನೆ ಸಂಬಂಧ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಹುಲಿ ಚಿರತೆಗಳ ಉಪಟಳ ಮಿತಿ ಮೀರಿದ್ದು ಸೆರೆಹಿಡಿದು ಸ್ಥಳಾಂತರಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ, ವನ್ಯಜೀವಿಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಇಂತಹ ಘಟನೆಗಳಿಂದ ಕೃಷಿ ಕಸುಬಿಗೆ ಅಡ್ಡಿಯಾಗುತ್ತಿದೆ , ಮುಂದಿನ ದಿನಗಳಲ್ಲಾದರೂ ರೈತರ ಹಿತಕಾಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಗ್ರಾಮದ ವಿಜಯ್ ಒತ್ತಾಯಿಸಿದ್ದಾರೆ.
PublicNext
30/01/2026 10:12 pm
LOADING...