ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಿಕ್ಷಕರ ಆಕ್ರೋಶ - ಹಳೆಯ ಪಿಂಚಣಿಗಾಗಿ 'ದೆಹಲಿ ಚಲೋ' ಹೋರಾಟ!

ಧಾರವಾಡ: ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿ ವತಿಯಿಂದ ನವದೆಹಲಿಯ ಜಂತರ್ ಮಂತರ್‌ನಲ್ಲಿ 'ದೆಹಲಿ ಚಲೋ' ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ಅವರು ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಮುಖ ಬೇಡಿಕೆಗಳು

ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸಿ, ನೂತನ ಪಿಂಚಣಿ ಯೋಜನೆ (NPS) ರದ್ದುಪಡಿಸುವುದು; ಸೇವೆಯಲ್ಲಿರುವ ಶಿಕ್ಷಕರಿಗೆ ಕಡ್ಡಾಯಗೊಳಿಸಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (TET) ರದ್ದುಪಡಿಸುವುದು; ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ (NEP) ವಿದ್ಯಾರ್ಥಿ ಮತ್ತು ಶಿಕ್ಷಕ ವಿರೋಧಿ ಅಂಶಗಳನ್ನು ಕೈಬಿಡುವುದು; ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವುದು; ದೇಶಾದ್ಯಂತ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡುವುದು; 8ನೇ ವೇತನ ಆಯೋಗದ ವರದಿಯನ್ನು ನಿಗದಿತ ಕಾಲಾವಧಿಯಲ್ಲಿ ಅನುಷ್ಠಾನಗೊಳಿಸುವುದು ಹಾಗೂ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಹಕ್ಕು ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈ ಹೋರಾಟದಲ್ಲಿ ಪ್ರಮುಖವಾಗಿ ಮುಂದಿಡಲಾಗುವುದು ಎಂದು ಗುರಿಕಾರ ವಿವರಿಸಿದರು.

ಫೆಬ್ರುವರಿ 5ರಂದು ಹೋರಾಟ

ಫೆಬ್ರುವರಿ 5ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಶಿಕ್ಷಕರು ಭಾಗವಹಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಹಕ್ಕೊತ್ತಾಯ ಮಾಡಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರು

ಸುದ್ದಿಗೋಷ್ಠಿಯಲ್ಲಿ ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಕೆ. ರಾಮದುರ್ಗ ಹಾಗೂ ಎಸ್.ಜಿ. ಸುಬ್ಬಾಪುರಮಠ ಅವರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

31/01/2026 03:58 pm

Cinque Terre

8.35 K

Cinque Terre

0

ಸಂಬಂಧಿತ ಸುದ್ದಿ