ಧಾರವಾಡ: ಧಾರವಾಡದ ಪ್ರತಿಷ್ಠಿತ ಅದರಲ್ಲೂ ರಾಜ್ಯದಾದ್ಯಂತ ಉತ್ತಮ ಹೆಸರು ಗಳಿಸಿರುವ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರ ನಡುವೆ ಇದೀಗ ಮುಸುಕಿನ ಗುದ್ದಾಟ ಏರ್ಪಟ್ಟಿದೆ.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಅವರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಹಿಡಿದು ಉಪನ್ಯಾಸಕರು, ಅತಿಥಿ ಉಪನ್ಯಾಸಕರ ವರ್ಗಾವಣೆಯಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆ ಎಂದು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರವಿ ಮಾಳಗೇರ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸಗೌಡರ, ಪಾರ್ವತಿ ಕುರ್ಲೆ ಅವರು ಜಂಟಿಯಾಗೇ ಸುದ್ದಿಗೋಷ್ಠಿ ನಡೆಸಿ ಕುಲಪತಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಮಾರ್ಚ್‌ನಿಂದ ಮತ್ತು ಜನವರಿ ತಿಂಗಳಲ್ಲಿ ಮಾತ್ರ ವರ್ಗಾವಣೆ ಮಾಡುವ ನಿಯಮವಿದೆ. ಆದರೆ, ಕುಲಪತಿಗಳು ನಿಯಮ ಮೀರಿ ವರ್ಷವಿಡೀ ವರ್ಗಾವಣೆ ನಡೆಸಿದ್ದಾರೆ. ವರ್ಗಾವಣೆಯಾದ ಒಬ್ಬ ವ್ಯಕ್ತಿಯನ್ನು ಮೂರು ವರ್ಷದವರೆಗೆ ವರ್ಗಾವಣೆ ಮಾಡುವಂತಿಲ್ಲ. ಆದರೆ, ಕುಲಪತಿಗಳು ಹಣದ ವ್ಯವಹಾರ ನಡೆಸಿ ಈ ವರ್ಗಾವಣೆ ಮಾಡಿರಬಹುದು ಎಂಬ ಸಂಶಯವಿದೆ. ವರ್ಗಾವಣೆ ಲಿಸ್ಟ್ ಕೊಡಿ ಎಂದು ಕೇಳಿದರೆ ಕುಲಪತಿಗಳು ಆ ಲಿಸ್ಟ್ ಕೊಡುತ್ತಿಲ್ಲ. ಈ ಸಂಬಂಧ ನಾವು ಲೋಕಾಯುಕ್ತರಿಗೆ ದೂರು ಸಹ ನೀಡುತ್ತೇವೆ. ವರ್ಗಾವಣೆ ಮಾಡಬೇಕಾದರೆ ಅದನ್ನು ಬೋರ್ಡ್ ಮುಂದೆ ಇಡಬೇಕಿತ್ತು. ಆ ಕೆಲಸವನ್ನ ಕುಲಪತಿಗಳು ಮಾಡಿಲ್ಲ. ಈ ಸಂಬಂಧ ರಾಜ್ಯಪಾಲರಿಗೆ, ಸಿಎಂ ಅವರಿಗೆ ಹಾಗೂ ಕೃಷಿ ಸಚಿವರಿಗೂ ನಾವು ದೂರು ನೀಡುತ್ತೇವೆ ಎಂದಿದ್ದಾರೆ.
ಕುಲಪತಿಗಳು ವರ್ಗಾವಣೆ ಪಟ್ಟಿ ಕೊಡಬೇಡಿ ಎನ್ನುತ್ತಾರೆ ವ್ಯವಸ್ಥಾಪನಾ ಮಂಡಳಿ ಸದಸ್ಯರು ವರ್ಗಾವಣೆ ಪಟ್ಟಿ ಕೊಡಿ ಎನ್ನುತ್ತಾರೆ ಇವರ ಮಧ್ಯೆ ಸಿಲುಕಿ ಒದ್ದಾಡುವಂತಾಗಿದೆ ಎಂದು ಪ್ರಭಾರ ಆಡಳಿತಾಧಿಕಾರಿಯಾಗಿದ್ದ ಕೆ.ಜಿ.ಕೊಪ್ಪದ ಅವರು ಆಡಳಿತಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಅವರು ತಮ್ಮ ಮಾತೃ ಖಾತೆಗೆ ವಾಪಸ್ ತೆರಳಿದ್ದಾರೆ ಎಂಬ ಅಂಶ ಕೂಡ ಇದೀಗ ಗೊತ್ತಾಗಿದೆ.
ನಿರಂತರ ವರ್ಗಾವಣೆಗಳ ಕಾರಣದಿಂದ, 28 ಸಂಶೋಧನಾ ಕೇಂದ್ರಗಳಲ್ಲಿ 20 ಕೇಂದ್ರಗಳು ಕಳೆದ 3 ವರ್ಷಗಳಿಂದ ಆರ್ಥಿಕ ನಷ್ಟದಲ್ಲಿವೆ. ಇತ್ತೀಚಿನ 2023-24 ಆರ್ಥಿಕ ವರ್ಷದಲ್ಲಿ ಒಟ್ಟಾರೆ 1.05 ಕೋಟಿ ರೂಪಾಯಿ ನಷ್ಟ ದಾಖಲಾಗಿದೆ. ವರ್ಗಾವಣೆ, ಮರುವರ್ಗಾವಣೆಯ ನಂತರ ಸಂಬಳವನ್ನು ತಪ್ಪಾದ ಖಾತೆ ಶೀರ್ಷಿಕೆಗಳ ಅಡಿಯಲ್ಲಿ ದಾಖಲಿಸಲಾಗುತ್ತಿದ್ದು, ಇದರಿಂದ ಸಿಬ್ಬಂದಿಗೂ ಹಾಗೂ ಖಜಾನೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ವ್ಯವಸ್ಥಾಪನಾ ಮಂಡಳಿ ಸದಸ್ಯರು ಆರೋಪಿಸಿದ್ದಾರೆ.
ಸದ್ಯ ಕೃಷಿ ವಿವಿ ಕುಲಪತಿ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರ ನಡುವಿನ ಗುದ್ದಾಟ ತಾರಕಕ್ಕೇರಿದ್ದು, ಸರ್ಕಾರ ಹಾಗೂ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2026 08:27 pm