ಮುಲ್ಕಿ:ಕಿಲ್ಪಾಡಿ ಗ್ರಾಮ ಪಂಚಾಯಿತಿಯ 2025 26 ನೇ ಸಾಲಿನ ಗ್ರಾಮಸಭೆ ಶನಿವಾರ ಗ್ರಾಮಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ವಿಕಾಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗೈರು, ಅಲ್ಲಲ್ಲಿ ತ್ಯಾಜ್ಯ ಬಿಸಾಡುವವರ ವಿರುದ್ಧ ಕ್ರಮ, ಅನಿಯಮಿತ ವಿದ್ಯುತ್ ನಿಲುಗಡೆ,
ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಘಟಕದಿಂದ ತೊಂದರೆ ಬಗ್ಗೆ ದೂರು ಕೇಳಿ ಬಂತು. ಗ್ರಾಮ ಸಭೆಗೆ ಪೋಲಿಸ್, ಕೃಷಿ, ಸಣ್ಣ ನೀರಾವರಿ, ತೋಟಗಾರಿಕೆ ಸಹಿತ ಪ್ರಮುಖ ಇಲಾಖಾಧಿಕಾರಿಗಳು ಗೈರುಹಾಜರಾಗಿದ್ದರು. ಅನಿಯಮಿತ ಲೋಡ್‌ಶೆಡ್ಡಿಂಗ್ ಬಗ್ಗೆ ಗ್ರಾಮಸ್ಥರಾದ ಜೆ.ಎಸ್.ಕರ್ಕೇರರವರು ಮೆಸ್ಕಾಂ ಎಸ್‌ಒ ಕೃಷ್ಣಪ್ಪನವರ ಬಳಿ ಪ್ರಸ್ತಾವಿಸಿ, ಸರಕಾರ ನಿರಂತರ ವಿದ್ಯುತ್ ನೀಡುವುದಾಗಿ ಹೇಳುತ್ತಿದೆ. ಆದರೆ ಮುಲ್ಕಿ, ಕಿಲ್ಪಾಡಿ ಪ್ರದೇಶದಲ್ಲಿ ನಿತ್ಯ 2-3ಗಂಟೆ ಲೋಡ್‌ಶೆಡ್ಡಿಂಗ್ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಮೆಸ್ಕಾಂ ನಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ವಾರದೊಳಗೆ ಸಮಸ್ಯೆ ಬಗೆಹರಿಯಲಿದೆ ಎಂದು ಮುಲ್ಕಿ ಮೆಸ್ಕಾಂ ಎಸ್.ಒ ಕೃಷ್ಣಪ್ಪ ಉತ್ತರಿಸಿದರು. ಎಸ್‌ಸಿ,ಎಸ್‌ಟಿ ಕಾಲನಿಯ ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸಿಲ್ಲ. ಈ ಬಗ್ಗೆ ಸೂಕ್ತ ಮಾಹಿತಿಯನ್ನೂ ನೀಡುತ್ತಿಲ್ಲ ಎಂದು ಗ್ರಾಪಂ ಸದಸ್ಯ ಗೋಪಿನಾಥ ಪಡಂಗ ಪ್ರಶ್ನಿಸಿ ಶೀಘ್ರ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದರು. ಶೀಘ್ರ ಸ್ಥಳ ಪರಿಶೀಲನೆ ನಡೆಸುವ ಭರವಸೆ ದೊರೆಯಿತು.
ಕಿಲ್ಪಾಡಿ ಗ್ರಾಮ ವ್ಯಾಪ್ತಿಯ ಕೆಂಚನಕೆರೆ ಬಳಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ಲಾಸ್ಟಿಕ್ ಸುಟ್ಟ ದುರ್ವಾಸನೆಯಿಂದ ಪರಿಸರದ ಜನರಿಗೆ ಉಸಿರಾಟ ತೊಂದರೆ, ವಾಂತಿ, ತಲೆಸುತ್ತುವಿಕೆ ಸಹಿತ ಅನಾರೋಗ್ಯ ಕಾಡುತ್ತಿದ್ದು, ಘಟಕವನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರಾದ ಲಿಲ್ಲಿ ಡಿಸೋಜಾ, ರಾಬರ್ಟ್ ಫುರ್ಟಾಡೋ, ಹಿಲ್ಡಾ ಫುರ್ಟಾಡೋ, ಫೆಲಿಕ್ಸ್ ತೌರೋರವರು ಗ್ರಾಪಂಗೆ ಲಿಖಿತ ದೂರು ಸಲ್ಲಿಸಿದರು. ಜತೆಗೆ ಅದೇ ಪರಿಸರದಲ್ಲಿ ಅನಧಿಕೃತ ಸಿಮೆಂಟ್ ಬ್ಲಾಕ್ ಘಟಕದಿಂದಲೂ ವಾಯುಮಾಲಿನ್ಯ, ಶಬ್ದ ಮಾಲಿನ್ಯವಾಗುತ್ತಿದ್ದು, ಪರವಾನಗಿ ರದ್ದತಿಗೆ ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ವಿಕಾಸ್ ಶೆಟ್ಟಿ ಮತ್ತು ಪಿಡಿಒ ಪೂರ್ಣಿಮಾ, 2021ರಲ್ಲಿ ಸಾರ್ವಜನಿಕ ದೂರಿನ ಮೇಲೆ ಘಟಕದ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು. ಘಟಕವು ಮತ್ತೆ ಪುನರಾರಂಭಗೊಂಡಿದ್ದರೆ ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಲಾಗುವುದು. ಜತೆಗೆ ಸಣ್ಣ ಕೈಗಾರಿಕಾ ಇಲಾಖೆಗೂ0ದೂರು ಸಲ್ಲಿಸಲಾಗುವುದು ಎಂದರು.
ಕೆಂಚನಕೆರೆ ಪರಿಸರದಲ್ಲಿ ಬೀದಿ ನಾಯಿ ಹಾವಳಿ, ರಸ್ತೆ ಬದಿ ಅಪರಿಚಿತರು ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದರು. ಮುಲ್ಕಿ ನಪಂ ವ್ಯಾಪ್ತಿಯ ಮಾನಂಪಾಡಿ ಸಮೀಪ ಕಿಲ್ಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಬಾವಿಯಲ್ಲಿ ಉಪ್ಪುನೀರಿನ ಸಮಸ್ಯೆ ಬಗ್ಗೆ ಶಂಕರ ಪೂಜಾರಿ ಅಹವಾಲು ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಸಭೆಯ ನೋಡಲ್ ಅಧಿಕಾರಿಯಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಂಗಮೇಶ್ ಹೆಳವರ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿ ಸಮಾಧಾನಪಡಿಸಿದರು.
ಮೆಸ್ಕಾಂ ಇಲಾಖೆಯ ಕೃಷ್ಣಪ್ಪ, ಆರೋಗ್ಯ ಇಲಾಖೆಯ ಸುಮಾ, ಪಶುಸಂಗೋಪನೆ ಇಲಾಖೆಯ ಡಾ.ವಿಶ್ವಾರಾಧ್ಯ, ಕಂದಾಯ ಇಲಾಖೆಯ ಆಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾರತಿ ಇಲಾಖಾ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ದಮಯಂತಿ ಎಮ್.ಶೆಟ್ಟಿಗಾರ್, ಪಿಡಿಒ ಪೂರ್ಣಿಮಾ, ಕಾರ್ಯದರ್ಶಿ ಹರಿಶ್ಚಂದ್ರ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Kshetra Samachara
31/01/2026 05:11 pm