ಸಿದ್ದಾಪುರ : ಪಟ್ಟಣದಲ್ಲಿ ನಡೆಯುತ್ತಿರುವ ಸಿದ್ದಾಪುರ ಸೊರಬ ರಸ್ತೆ ಕಾಮಗಾರಿ ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿ ನಡೆಯುತ್ತಿದ್ದು, ಕೂಡಲೇ ಸರಿಪಡಿಸಿಕೊಂಡು ಕಾಮಗಾರಿ ನಡೆಸುವಂತೆ ಸಿದ್ದಾಪುರ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹ ಮಾಡಿದ್ದಾರೆ.
ಸಿದ್ದಾಪುರ ಸೊರಬ ರಸ್ತೆ ಸಂಪೂರ್ಣ ಹಾಳಾಗಿದ್ದು ಇದರಿಂದ ಜನರಿಗೆ ಹಾಗೂ ವಾಹನ ಸವಾರರಿಗೆ ಓಡಾಟ ಮಾಡಲು ತೊಂದರೆ ಆಗುತ್ತಿದೆ, ಲೋಕೋಪಯೋಗಿ ಇಲಾಖೆಯವರು ಮಳೆಗಾಲ ಪೂರ್ವದಲ್ಲಿ ಚರಂಡಿ ನೀರು ರಸ್ತೆಗೆ ಬರದಂತೆ ನಿರ್ವಹಣೆ ಮಾಡದಿದ್ದರ ಪರಿಣಾಮ ರಸ್ತೆಯ ಮೇಲೆ ಮಳೆಯ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ ಕೂಡಲೇ ರಸ್ತೆಯ ಎರಡೂ ಕಡೆ ಪಕ್ಕಾ ಗಟಾರ ನಿರ್ಮಿಸಿ ರಸ್ತೆ ಕಾಮಗಾರಿ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಸಾರ್ವಜನಿಕರು ಪ್ರತಿಭಟನೆ ಮಾಡಿದ್ದೆವು.
ನಮ್ಮ ಪ್ರತಿಭಟನೆಗೆ ಮಣಿದು ಸರ್ಕಾರ ರಸ್ತೆ ಕಾಮಗಾರಿಗೆ 1.90 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ಲೋಕೋಪಯೋಗಿ ಇಲಾಖೆಯವರು ರಸ್ತೆಯ ಎರಡೂ ಬದಿಗೆ ಪಕ್ಕಾ ಗಟಾರ ನಿರ್ಮಿಸದೆ ರಸ್ತೆ ಕಾಮಗಾರಿ ಮಾಡುತ್ತಿದ್ದು ಇದರಿಂದ ಮಳೆಗಾಲದಲ್ಲಿ ಗಟಾರದ ನೀರು ರಸ್ತೆ ಮೇಲೆ ಹರಿದು ರಸ್ತೆ ಹಾಳಾಗುತ್ತದೆ.
1.90 ಕೋಟಿ ಹಣದ ರಸ್ತೆ ಒಂದೆರಡು ವರ್ಷವೂ ಉಪಯೋಗಕ್ಕೆ ಬರದಂತೆ ಆಗುತ್ತದೆ. ಲೋಕೋಪಯೋಗಿ ಇಲಾಖೆ ಅಧಿಕಾರಿ ಶಶಿಕಾಂತ ಗೌಡ ಅವರನ್ನು ಪಕ್ಕಾ ಗಟಾರ ಮಾಡಿಕೊಂಡು ರಸ್ತೆ ಕಾಮಗಾರಿ ಮಾಡಿ ಎಂದು ಹೇಳಿದರೆ ಈಗ ರಸ್ತೆ ಮಾಡುತ್ತೇವೆ ಪಕ್ಕಾ ಗಟಾರ ಮುಂದೆ ನೋಡೋಣ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಸಿದ್ದಾಪುರ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಜನರ ತೆರಿಗೆ ಹಣ ನೀರು ಪಾಲಾಗುತ್ತಿದೆ.ಕೂಡಲೇ ಮಾನ್ಯ ಶಾಸಕರು ರಸ್ತೆಯ ಎರಡೂ ಬದಿ ಪಕ್ಕಾ ಗಟಾರ ನಿರ್ಮಿಸಿ ರಸ್ತೆ ಕಾಮಗಾರಿ ಮಾಡಬೇಕೆಂದು ಇಲಾಖೆಗೆ ಆದೇಶಿಸಿ ಸಮರ್ಪಕ ಕೆಲಸ ಆಗುವಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ಬಿಜೆಪಿ ಕಾಮಗಾರಿ ಸ್ಥಳದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
31/01/2026 07:59 pm