ಸಿದ್ದಾಪುರ: ಕಳೆದ ಐದಾರು ವರ್ಷಗಳಿಂದ ರಸ್ತೆ ಅಪಘಾತ ಹೆಚ್ಚುತ್ತಿದ್ದರೂ ಸಿದ್ದಾಪುರ-ಚಂದ್ರಗುತ್ತಿ ರಸ್ತೆಯ ನವೀಕರಣ ಮಾತ್ರ ಗಗನ ಕುಸುಮವಾಗಿದ್ದು ಈ ಮಾರ್ಗದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ಪ್ರಮುಖ ಧಾರ್ಮಿಕ ಪ್ರವಾಸಿತಾಣವಾಗಿರುವ ಚಂದ್ರಗುತ್ತಿಗೆ ದಿನನಿತ್ಯ ಸಾವಿರಾರು ಭಕ್ತರು ಓಡಾಡುತ್ತಾರೆ.
ಹೆಚ್ಚಿನದಾಗಿ ಸಿದ್ದಾಪುರ, ಹಳ್ಳಿಬೈಲು, ಐಗೋಡು, ಕಾನಗೋಡು ಮಾರ್ಗವಾಗಿ ಸಾಗುತ್ತಾರೆ. ಆದರೆ ಈ ರಸ್ತೆಗೆ ಕಳೆದ ಐದಾರು ವರ್ಷಗಳಿಂದ ನವೀಕರಣ ಭಾಗ್ಯ ಸಿಕ್ಕಿಲ್ಲ. ಅಲ್ಲಿಲ್ಲಿ ತೇಪೆ ಹಾಕಲಾಗಿದೆ ಹೊರತು ಹೊಂಡ ಗುಂಡಿಗಳು ಹಾಗೆಯೇ ಇವೆ. ಹೀಗಾಗಿಯೇ ಪ್ರತಿನಿತ್ಯ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಸಿದ್ದಾಪುರದಿಂದ ಹಳ್ಳಿಬೈಲ್ ವರೆಗೆ ಅಲ್ಲಲ್ಲಿ ಪ್ಯಾಚ್ ವರ್ಕ್ ಮಾಡಲಾಗಿದೆ.
ಆದರೆ ಐಗೋಡಿನಿಂದ ಚಂದ್ರಗುತ್ತಿಯ ವರೆಗೆ ಗುಂಡಿಗಳದ್ದೇ ಕಾರುಬಾರು. ಇಲ್ಲಿನ ಐಗೋಡಿನ ಮುಖ್ಯ ತಿರುವಿನಲ್ಲಿ ರಸ್ತೆಯು ಕಿತ್ತು, ಸಣ್ಣ ಜೆಲ್ಲಿಕಲ್ಲುಗಳು ಹರಡಿರುವ ಕಾರಣ ದಿನನಿತ್ಯ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುತ್ತಿವೆ. ಈ ಕುರಿತು ಗ್ರಾಮಸ್ಥರು ಸಾಕಷ್ಟು ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಡೋಂಟ್ ಕೇರ್ ಆಟಿಟ್ಯೂಡ್ ತೋರಿಸುತ್ತಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೇ ಟೆಂಡರ್ ಪಡೆಯುವವರೂ ಕೂಡ ಕೇವಲ ಜೆಲ್ಲಿಯ ಮೇಲೆ ಡಾಂಬರ್ ಹಾಕಿ ಹಣ ಎಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಮಾತ್ರ ಸಾವಿನ ಜೊತೆಗೆ ಪ್ರಯಾಣ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಒಂದು ತಿಂಗಳ ಒಳಗಾಗಿ ರಸ್ತೆ ನವೀಕರಣ ಆಗದಿದ್ದರೆ ಗ್ರಾಮಸ್ಥರು ರಸ್ತೆ ತಡೆದು ಹೋರಾಟ ಮಾಡುವ ಸೂಚನೆ ನೀಡಿದ್ದಾರೆ. ಸದ್ಯ ಎರಡು ಜಿಲ್ಲೆಗಳ ಪ್ರಮುಖ ಕೊಂಡಿಯಾಗಿರುವ ರಸ್ತೆಯ ಅಭಿವೃದ್ಧಿಗೆ ಇನ್ನೊಂದು ಚುನಾವಣೆಯೇ ಬರಬೇಕಾ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
Kshetra Samachara
02/02/2026 05:54 pm
LOADING...