ಭಟ್ಕಳ: ಬಡವರು, ಕಾರ್ಮಿಕರು ಹಾಗೂ ದಿನಗೂಲಿ ನೌಕರರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಯ ಮೂಲಕ ರಾಜ್ಯದಾದ್ಯಂತ ಸುಮಾರು 6 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಜಾದ್ ನಗರದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿರಾ ಕ್ಯಾಂಟೀನ್‌ಗಳು ಕೇವಲ ಹಸಿದವರ ಹಸಿವು ನೀಗಿಸುವುದಷ್ಟೇ ಅಲ್ಲದೆ, ಮಹಿಳೆಯರು ಹಾಗೂ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಾನವೀಯ ಯೋಜನೆಗಳಾಗಿವೆ ಎಂದು ಸಚಿವರು ಬಣ್ಣಿಸಿದರು. ಇದೇ ವೇಳೆ, ಸರ್ಕಾರ ಘೋಷಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನೂ ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದು ಮಂಕಾಳ ವೈದ್ಯ ಹೇಳಿದರು.
ಕ್ಯಾಂಟೀನ್‌ಗೆ ಚಾಲನೆ ನೀಡಿದ ಸಚಿವರು, ಸ್ವತಃ ಅಡುಗೆ ಬಡಿಸಿ ಸಾರ್ವಜನಿಕರಿಗೆ ಊಟ ವಿತರಿಸಿದರು. ನಂತರ, ಕ್ಯಾಂಟೀನ್‌ನಲ್ಲಿ ತಯಾರಾದ ಆಹಾರವನ್ನು ಸವಿದು ಅದರ ಗುಣಮಟ್ಟವನ್ನು ಪರಿಶೀಲಿಸಿದರು.
ವಸತಿ ಯೋಜನೆ ಮತ್ತು ಪಹಣಿ ವಿತರಣೆ
ಭಟ್ಕಳ ಪಟ್ಟಣದ ಹುರಳಿಸಾಲಿನಲ್ಲಿ ಹೌಸಿಂಗ್ ಸ್ಕೀಮ್ ಅಡಿಯಲ್ಲಿ 700 ಮನೆಗಳ ನಿರ್ಮಾಣ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಸಚಿವರು ಮಾಹಿತಿ ನೀಡಿದರು. ಸರ್ಕಾರದ ಜಾಗವನ್ನು ಈಗಾಗಲೇ ವಸತಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಈ ಯೋಜನೆ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಸಾಮಾನ್ಯ ಜನರಿಗೆ ಸೂರು ಕಲ್ಪಿಸುವ ಉದ್ದೇಶದಿಂದಲೇ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರಿ ಪಡ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರು ಅಗತ್ಯ ದಾಖಲೆಗಳನ್ನು ಸಲ್ಲಿಸಿದಲ್ಲಿ, ಪಂಚಾಯಿತಿ ವ್ಯಾಪ್ತಿಯಲ್ಲಿ 5 ಗುಂಟೆ ಹಾಗೂ ನಗರ ವ್ಯಾಪ್ತಿಯಲ್ಲಿ 2.5 ಗುಂಟೆ ಜಾಗಕ್ಕೆ ಪಹಣಿ ಪತ್ರವನ್ನು ನೀಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಫ್ಸಾ ಹುಜೈಸಾ, ಉಪಾಧ್ಯಕ್ಷ ಸೈಯದ್ ಇಮ್ರಾನ್ ಅಹ್ಮದ್ ಲಂಕಾ, ಈಶ್ವರ ಮೊಗೇರ, ಮುಖ್ಯಾಧಿಕಾರಿ ಎನ್. ಮಂಜಪ್ಪ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು ನಾಯ್ಕ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಕೆ. ಎಸ್. ಕಮ್ಮಾರ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ನಾರಾಯಣ ನಾಯ್ಕ ನೆರವೇರಿಸಿದರೆ, ಬಿಂದು ಮತ್ತು ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು.
PublicNext
01/02/2026 09:29 pm