ಬೆಳಗಾವಿ: "ಎಂಜಿನಿಯರ್‌ಗಳಾದ ನೀವು ನಿಮ್ಮ ಜ್ಞಾನ ಮತ್ತು ಸುಸ್ಥಿರತೆ, ಸ್ಥಿತಿಸ್ಥಾಪಕತ್ವವನ್ನು ಒಳಗೊಂಡು ರಾಷ್ಟ್ರೀಯ ಸನ್ನದ್ಧತೆಯನ್ನು ಬಲಪಡಿಸಲು ಶ್ರಮಿಸಬೇಕು" ಎಂದು ಕರ್ನಾಟಕ ನೌಕಾ ನೆಲೆಯ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಬೆಳಗಾವಿ ಕ್ಯಾಂಪಸ್ ಜ್ಞಾನ ಸಂಗಮದಲ್ಲಿ ಆಯೋಜಿಸಿದ್ದ ತನ್ನ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ( ಭಾಗ-2) ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, "ರಾಷ್ಟ್ರದ ಪ್ರಗತಿ, ಭದ್ರತೆ ಮತ್ತು ಸಮೃದ್ಧಿಗೆ ನೀವು ನೀಡುವ ಕೊಡುಗೆಗಳಿಗೆ ಮುಂಗಡವಾಗಿ ಶುಭ ಹಾರೈಸುತ್ತೇನೆ. ಎಂಜಿನಿಯರ್‌ಗಳು ಕಂಡು ಹಿಡಿಯುವ ನೂತನ ತಂತ್ರಜ್ಞಾನಗಳು ಮನುಷ್ಯನು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತಿರಬೇಕು. ಹವಾಮಾನ ಬದಲಾವಣೆಯನ್ನು ಎದುರಿಸುವುದರಿಂದ ಹಿಡಿದು, ಆರೋಗ್ಯ ಸೇವೆಗಳನ್ನು ಸುಧಾರಿಸುವವರೆಗೂ ತಂತ್ರಜ್ಞಾನದ ಅವಶ್ಯಕತೆ ಇದೆ".
"ನಿಜವಾದ ನಾಯಕತ್ವವು ನವೀನತೆಯಲ್ಲಷ್ಟೇ ಅಲ್ಲ, ನೈತಿಕ ಹೊಣೆಗಾರಿಕೆ, ತಂಡದ ಕೆಲಸ, ವಿದ್ಯಾರ್ಥಿಗಳು ಸ್ವಾರ್ಥ ಬಿಟ್ಟು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನೀವು ಇದೀಗ ವೃತ್ತಿ ಜೀವನಕ್ಕೆ ಹೆಜ್ಜೆ ಇಡುತ್ತಿದ್ದೀರಿ, ದೊಡ್ಡ ಕನಸುಗಳನ್ನು ಕಾಣಿ. ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸಿ" ಎಂದು ಸಲಹೆ ನೀಡಿದರು.
"ವಿಟಿಯು ಕೃತಕ ಬುದ್ಧಿಮತ್ತೆ(ಎಐ), ಕ್ವಾಂಟಮ್ ಕಂಪ್ಯೂಟಿಂಗ್ ನಂತಹ ತಂತ್ರಜ್ಞಾನಗಳು, ಅಡ್ವಾನ್ಸ್ ಕಮ್ಯೂನಿಕೇಷನ್, ಸೈಬರ್ ಸೆಕ್ಯೂರಿಟಿಯನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಂತ್ರಜ್ಞಾನದಲ್ಲಿ ಮುಂದಿದೆ. ಇದು ರಾಷ್ಟ್ರದ ಪ್ರಗತಿ ಮತ್ತು ಭದ್ರತೆಗೆ ಅತ್ಯಂತ ಅಗತ್ಯವಾದ ಕ್ಷೇತ್ರಗಳಾಗಿವೆ" ಎಂದರು.
"ಏರೋಸ್ಪೇಸ್ ಮತ್ತು ಡಿಫೆನ್ಸ್‌ನಲ್ಲಿ "ಸೆಂಟರ್ ಆಫ್ ಎಕ್ಸ್ ಲೆನ್ಸ್" ಸ್ಥಾಪನೆ ಮತ್ತು ಡಿಫೆನ್ಸ್ ಟೆಕ್ನಾಲಜಿಯಲ್ಲಿ ಪ್ರಸ್ತಾಪಿತ ಎಂ.ಟೆಕ್ ಕಾರ್ಯಕ್ರಮಗಳು, ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯಾಭಿವೃದ್ಧಿಗೆ ವಿ.ಟಿ.ಯು ನೀಡುತ್ತಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ" ಎಂದರು.
"ಶಿಕ್ಷಣ, ಸಂಶೋಧನೆ ಮತ್ತು ನವೀನತೆಯಲ್ಲಿ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ವಿಟಿಯು, ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಳ್ಳವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಇಂತಹ ಸಹಭಾಗಿತ್ವಗಳು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನೌಕಾಪಡೆಯ ಸಿಬ್ಬಂದಿ ಏರೋಸ್ಪೇಸ್, ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಂಕೀರ್ಣ ಸವಾಲುಗಳನ್ನು ಸಂಯುಕ್ತವಾಗಿ ಎದುರಿಸಲು ಸಾಧ್ಯವಾಗುತ್ತದೆ" ಎಂದರು.
PublicNext
02/02/2026 07:54 pm