ಬೆಳಗಾವಿ: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ, ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಂಗಳವಾರ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ
ಸಂಕೇಶ್ವರದ ಶಂಕರನಗರ ನಿವಾಸಿ ದರ್ಶನ ಭಗವಂತ ಹುಣಶ್ಯಾಳ (23) ಶಿಕ್ಷೆಗೊಳಗಾದ ಆರೋಪಿ. ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯೊಂದಿಗೆ ಪ್ರೀತಿಯ ನಾಟಕವಾಡಿ, 2024ರ ಆಗಸ್ಟ್ 24ರಂದು ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ನಿಡಸೋಸಿ ರಸ್ತೆಯಲ್ಲಿ ತಡೆದಿದ್ದ. ಆಗಸ್ಟ್ 27ರಂದು ರಾತ್ರಿ ಬಾಲಕಿಯನ್ನು ತನ್ನ ಬೈಕ್‌ನಲ್ಲಿ ಕರೆದೊಯ್ದು ಅಥಣಿಯಲ್ಲಿ ಬಾಡಿಗೆ ಮನೆ ಪಡೆದಿದ್ದ. ಅಲ್ಲಿ ತಾವಿಬ್ಬರೂ ದಂಪತಿ ಎಂದು ಮನೆ ಮಾಲೀಕರನ್ನು ನಂಬಿಸಿದ್ದ. ನಂತರ, ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಬಾಡಿಗೆ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯದ ಬಳಿಕ, ಈ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಮತ್ತು ತಾನೇ ಒತ್ತಾಯಿಸಿ ಕರೆತಂದಿದ್ದಾಗಿ ಹೇಳುವಂತೆ ಬಾಲಕಿಗೆ ಬೆದರಿಕೆ ಹಾಕಿದ್ದ.
ಪೊಲೀಸರ ಕಾರ್ಯಾಚರಣೆ
ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ದರ್ಶನ ಮತ್ತು ಬಾಲಕಿಯನ್ನು ಅಥಣಿಯಲ್ಲಿ ಪತ್ತೆಹಚ್ಚಿ ಕರೆತಂದರು. ಅಂದಿನ ತನಿಖಾಧಿಕಾರಿ ಕೆ.ಬಿ. ಕಂಠಿ ಅವರು ಪ್ರಕರಣ ದಾಖಲಿಸಿದ್ದರು. ಬಳಿಕ, ಸಂಕೇಶ್ವರ ಪಿಐ ಆರ್.ಎಸ್. ಖೋತ ಮತ್ತು ಎಸ್.ಎಂ. ಆವೂಜಿ ಅವರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-01, ಬೆಳಗಾವಿಗೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು
ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಪ್ರಕರಣದ ವಿಚಾರಣೆ ನಡೆಸಿದರು. ಒಟ್ಟು 8 ಸಾಕ್ಷಿಗಳ ವಿಚಾರಣೆ, 50 ದಾಖಲೆಗಳು ಮತ್ತು 6 ಮುದ್ದೆಮಾಲುಗಳ ಆಧಾರದ ಮೇಲೆ ಆರೋಪಿ ದರ್ಶನ ಭಗವಂತ ಹುಣಶ್ಯಾಳ (23) ಮೇಲಿನ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ತೀರ್ಪು ನೀಡಿತು.
ಶಿಕ್ಷೆ ಮತ್ತು ಪರಿಹಾರ
ನ್ಯಾಯಾಲಯವು ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ, ಬಿ.ಎನ್.ಎಸ್. ಕಾಯ್ದೆಯ ಕಲಂ 137ರ ಅಡಿಯಲ್ಲಿ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 25,000 ರೂಪಾಯಿ ದಂಡವನ್ನೂ ವಿಧಿಸಿದೆ. ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪರಿಹಾರ ಧನವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಠೇವಣಿ ಇಡಲು ಸೂಚಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಲ್.ವಿ. ಪಾಟೀಲರು ವಾದ ಮಂಡಿಸಿದ್ದರು.
PublicNext
04/02/2026 08:13 am