ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಹರಿದು ಬಂದ ಭಕ್ತಸಾಗರ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ಪರಿ ಇದು. ಪ್ರತಿ ವರ್ಷ ಪಾಲ್ಗುಣ ಮಾಸದ ಚಿತ್ತ ನಕ್ಷತ್ರದಲ್ಲಿ ನಡೆಯುವ ಈ ರಥೋತ್ಸವ ಮಧ್ಯ ಕರ್ನಾಟಕದ ಅತಿದೊಡ್ಡ ರಥೋತ್ಸವವಾಗಿದೆ.

ಇನ್ನೂ ಬಯಲುಸೀಮೆಯ ಜನರ ಆರಾಧ್ಯ ದೈವ ಶ್ರೀಗುರು ತಿಪ್ಪೇರುದ್ರಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಬಿರು ಬಿಸಿಲಿನ ನಡುವೆ ಲಕ್ಷಾಂತರ ಮಂದಿ ಆಗಮಿಸಿದ್ದರು. ರಾಜ್ಯ ಸೇರಿದಂತೆ ನೆರೆಯ ಆಂಧ್ರ, ತೆಲಂಗಾಣದಿಂದಲೂ ಕೂಡಾ ಭಕ್ತರ ದಂಡೆ ಹರಿದು ಬಂದಿತ್ತು. ಚಿತ್ತ ನಕ್ಷತ್ರದಲ್ಲಿ ಪಂಚಗಾಲಿಗಳ ರಥ ಮುಂದೆ ಸಾಗುತ್ತಿದ್ದಂತೆ ಭಕ್ತ ಸಾಗರದ ಉದ್ಘೋಷ ಮುಗಿಲು ಮುಟ್ಟಿತ್ತು. ಇನ್ನೂ 75 ಅಡಿಗಳ ತೇರು ಸಾಗುತ್ತಿದ್ದಂತೆ ಬಾಳೆಹಣ್ಣು, ಕೊಬ್ಬರಿ, ಮೆಣಸು ಎಸೆಯುವ ಮೂಲಕ ಲಕ್ಷಾಂತರ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು.

ಇನ್ನೂ ವಿವಿಧ ಕಲಾ ತಂಡಗಳು ಕೂಡಾ ಜಾತ್ರೆಗೆ ಮತ್ತಷ್ಟು ಮೆರಗು ನೀಡಿದವು. ಈ ನಡುವೆ ರಥೋತ್ಸವ ಆರಂಭಕ್ಕೂ ಮುನ್ನವೇ ಮುಕ್ತಿ ಭಾವುಟ ಹರಾಜು ಎಲ್ಲರ ಗಮನ ಸೆಳೆಯಿತು. ಬರೋಬ್ಬರಿ 32 ಲಕ್ಷ ರೂಪಾಯಿಗಳಿಗೆ ಶಿರಾ ಮೂಲದ ಉದ್ಯಮಿ ಶ್ರೀನಾಥ್ ಮುಕ್ತಿ ಭಾವುಟ ಪಡೆದರು. ಇನ್ನೂ ಜಾತ್ರೆಯಲ್ಲಿ ಒಳ ಮಠದ ಮುಂಭಾಗದಲ್ಲಿ ಸಾವಿರಾರು ಮಂದಿ ಭಕ್ತರು ಕೊಬ್ಬರಿ ಸುಟ್ಟು ಹಟ್ಟಿ ತಿಪ್ಪೇಶನಿಗೆ ತಮ್ಮ ಭಕ್ತಿ ಸಮರ್ಪಿಸಿ ಪುನೀತರಾದರು. ಈ ನಡುವೆ ತೇರು ಬೀದಿಯಲ್ಲಿ ನಟ ದರ್ಶನ್ ಅಭಿಮಾನಿಗಳು ಫೋಟೋಗಳನ್ನು ಪ್ರದರ್ಶಿಸಿ ಹುಚ್ಚು ಪ್ರೇಮ ಮೆರೆದರು.

ಒಟ್ಟಾರೆ ಮಾಡಿದಷ್ಟು ನೀಡು ಭಿಕ್ಷೆ ಸಂದೇಶ ಸಾರಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಲಕ್ಷಾಂತರ ಮಂದಿ ಭಕ್ತರು, ಒಂದೆಡೆ ಸೇರಿ ವಿಜೃಂಭಣೆಯಿಂದ ತಿಪ್ಪಜ್ಜನ ತೇರನ್ನು ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದು ಮಾತ್ರ ನೋಡುಗರ ಕಣ್ಮನ ಸೆಳೆಯುವಂತಿತ್ತು.

Edited By : Manjunath H D
PublicNext

PublicNext

07/03/2026 08:36 am

Cinque Terre

12.27 K

Cinque Terre

0

ಸಂಬಂಧಿತ ಸುದ್ದಿ