ಸಕಲೇಶಪುರ: ತಾಲೂಕಿನ ಹಾನುಬಾಳು ಹೋಬಳಿಯ ದೇವಾಲಕೆರೆಯಲ್ಲಿ ಇರುವ ಕನಸು ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಖರೀದಿಸಿದ ಬಿಯರ್ ಬಾಟಲಿಯೊಳಗೆ ಪ್ಲಾಸ್ಟಿಕ್ ತುಂಡುಗಳು, ಧೂಳು ಹಾಗೂ ಕಡ್ಡಿಯಂತಹ ಅಶುದ್ಧ ವಸ್ತುಗಳು ಪತ್ತೆಯಾದ ಘಟನೆ ಬೆಳಕಿಗೆ ಬಂದಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ನೆಲಗಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಸಂಜೆ ಇಲ್ಲಿ ಯುಬಿ ಬಿಯರ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ, ಬಾಟಲಿಯೊಳಗೆ ಉಪ್ಪಿನಕಾಯಿ ಪ್ಲಾಸ್ಟಿಕ್ ಚೂರುಗಳು, ಧೂಳು ಮತ್ತು ಕಡ್ಡಿಯಂತಹ ಅಶುದ್ಧ ವಸ್ತುಗಳು ಕಂಡು ಬಂದಿವೆ ಎಂದು ತಿಳಿಸಿದ್ದಾರೆ.
ಈ ಕುರಿತು ತಕ್ಷಣವೇ ಬಾರ್ ಮಾಲೀಕರ ಗಮನಕ್ಕೆ ತರಲಾಗಿದ್ದು, ಅವರಿಂದ ಬಿಯರ್ ವಿತರಕರ ದೂರವಾಣಿ ಸಂಖ್ಯೆಯನ್ನು ಪಡೆದು ಸಂಪರ್ಕಿಸಿದಾಗ, “ಈ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಬೇಡಿ, ನಿಮಗೆ ಇನ್ನೂ ಎರಡು ಹೆಚ್ಚುವರಿ ಬಿಯರ್ ಕೊಡುತ್ತೇವೆ” ಎಂದು ಹೇಳಲಾಗಿದೆ ಎಂಬ ಆರೋಪ ಕೇಳಿಬಂದಿದೆ
ಈ ರೀತಿಯ ಕಲಬೆರಕೆಯಿರುವ ಪಾನೀಯಗಳನ್ನು ಗ್ರಾಹಕರು ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಇದಕ್ಕೆ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ. ಅಲ್ಲದೇ, ಇದು ಕಂಪನಿ ಮಟ್ಟದಲ್ಲಿ ಉಂಟಾದ ದೋಷವೇ ಅಥವಾ ಸ್ಥಳೀಯ ಮಟ್ಟದಲ್ಲಿ ಬಿಯರ್ ಕಲುಷಿತಗೊಂಡಿರುವ ಪ್ರಕರಣವೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಬಕಾರಿ ಇಲಾಖೆಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಗ್ರಾಹಕರು ಬಾಟಲಿಗಳನ್ನು ಸರಿಯಾಗಿ ಪರಿಶೀಲಿಸಿ ಬಳಿಕವೇ ಸೇವನೆ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
PublicNext
09/03/2026 12:37 pm
LOADING...