ಬೆಳಗಾವಿ: 18 ವರ್ಷಗಳ ಹಿಂದೆ ಸ್ವತಃ ತಂದೆ ದೇಹವನ್ನೇ ಛೇದನ ಮಾಡಿ ಇಡೀ ವಿಶ್ವದ ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತೆ ಮಾಡಿ, ಹೊಸ ಸಂದೇಶ ಕೊಟ್ಟಿದ್ದ ಬೆಳಗಾವಿಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಅವರು, ಈಗ ತಮ್ಮ ತಾಯಿ ದೇಹವನ್ನೂ ಛೇದಿಸಿ ಹೊಸ ದಾಖಲೆ ಬರೆಯಲು ಮುಂದಾಗಿದ್ದಾರೆ.
ಹೌದು, ಸೋಮವಾರ ನಿಧನರಾದ ಆಯುರ್ವೇದ ವೈದ್ಯೆ, ಶತಾಯುಷಿ ಸುಶೀಲಾದೇವಿ ಬಿ.ರಾಮಣ್ಣವರ(101) ಅವರ ಇಚ್ಛೆಯಂತೆ ಅವರ ದೇಹವನ್ನು ನಗರದ ಕೆಎಲ್ಇ ಬಿ.ಎಂ.ಕಂಕಣವಾಡಿ ಆಯುರ್ವೇದ ಆಸ್ಪತ್ರೆಗೆ ಮಂಗಳವಾರ ದಾನ ಮಾಡಿದರು. ದೇಹದಾನ ಜಾಗೃತಿ ಸಂಬಂಧವೇ ಅವರೇ ಹುಟ್ಟುಹಾಕಿದ ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಮೂಲಕ ತಮ್ಮದೇ ದೇಹವನ್ನು ದಾನ ಮಾಡಿ ಎಲ್ಲ ವೈದ್ಯರಿಗೂ ಮಾದರಿಯಾದರು.
ಸ್ವಾತಂತ್ರ್ಯ ಹೋರಾಟಗಾರ, ವೈದ್ಯರಾಗಿದ್ದ ಪತಿ ಬಿ.ಎಸ್.ರಾಮಣ್ಣವರ ಅವರು 2008ರ ನವೆಂಬರ್ 13ರಂದು ನಿಧನರಾಗಿದ್ದರು. ತಮ್ಮ ದೇಹವನ್ನು ತಮ್ಮ ಪುತ್ರನೇ ಛೇದನ ಮಾಡಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂದು ಅವರು ಮೃತ್ಯುಪತ್ರ ಬರೆದಿದ್ದರು. ಅದರ ಪ್ರಕಾರ, ಪುತ್ರ ಡಾ.ಮಹಾಂತೇಶ ರಾಮಣ್ಣವರ ಅವರು ತಂದೆಯ ದೇಹ ಛೇದಿಸಿ ಪಾಠ ಮಾಡಿದ್ದರು. ಇದು ದೇಶಾದ್ಯಂತ ಗಮನ ಸೆಳೆದಿತ್ತು. ತಾಯಿ ಸುಶೀಲಾದೇವಿ ಕೂಡ ಅದೇ ರೀತಿಯ ಮೃತ್ಯುಪತ್ರ ಬರೆದಿದ್ದಾರೆ. ನನ್ನ ದೇಹವನ್ನು ನೀನೆ ಛೇದಿಸಬೇಕು ಅಂತಾ ಮಗ ಮಹಾಂತೇಶ ಅವರಿಂದ ಮಾತು ತೆಗೆದುಕೊಂಡಿದ್ದಾರೆ.
ಬಿ.ಎಂ.ಕಂಕಣವಾಡಿ ಮಹಾವಿದ್ಯಾಲಯಕ್ಕೆ ಬೈಲಹೊಂಗಲದಿಂದ ಆಗಮಿಸಿದ ಡಾ.ಸುಶೀಲಾದೇವಿ ಅವರ ಮೃತದೇಹವನ್ನು ಗೌರವಯುತವಾಗಿ ಬರಮಾಡಿಕೊಳ್ಳಲಾಯಿತು. ಇಲ್ಲಿ ಅಂತಿಮ ದರ್ಶನ ಪಡೆದ ಬಳಿಕ ದೇಹವನ್ನು ಕಂಕಣವಾಡಿ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ಇಲ್ಲಿನ ಶರೀರ ರಚನಾಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ದೇಹವನ್ನು ಇರಿಸಲಾಯಿತು. ಇದೇ ಪ್ರಯೋಗಾಲಯದಲ್ಲಿ ಇಂದಿಗೂ ಸುಶೀಲಾದೇವಿ ಅವರ ಪತಿ ಡಾ.ಬಿ.ಎಸ್.ರಾಮಣ್ಣವರ ಮೃತದೇಹವನ್ನು ಇರಿಸಲಾಗಿದೆ. ಈಗ ಪತಿಯ ಪಕ್ಕದಲ್ಲೆ ಅವರ ದೇಹವನ್ನು ಇರಿಸಿದ್ದು, ಪತಿ-ಪತ್ನಿ ಮತ್ತೆ ಒಂದಾದರು.
ದೇಹದಾನದ ಬಗ್ಗೆ ಕೇವಲ ಜಾಗೃತಿ ಮೂಡಿಸುವುದಷ್ಟೇ ಅಲ್ಲ. ಸ್ವತಃ ತಮ್ಮ ದೇಹದಾನ ಮಾಡುವ ಮೂಲಕ ಡಾ.ಮಹಾಂತೇಶ ರಾಮಣ್ಣವರ ತಂದೆ-ತಾಯಿ ಇಡೀ ಜಗತ್ತಿಗೆ ಮಾದರಿ ಆಗಿದ್ದಾರೆ. ಅವರ ಈ ಮಹತ್ಕಾರ್ಯವನ್ನು ಎಷ್ಟು ಹೊಗಳಿದರೂ ಕಡಿಮೆಯೇ.
ತಾಯಿ ಕಳೆದುಕೊಂಡ ದುಃಖ ಇಡೀ ರಾಮಣ್ಣವರ ಕುಟುಂಬ ಮತ್ತು ಅವರ ಸಂಬಂಧಿಕರಲ್ಲಿ ಕಂಡು ಬಂದರೂ, ತಂದೆ-ತಾಯಿ ಮಾತು ನಡೆಸಿಕೊಡಲು ಎಲ್ಲರೂ ಖುಷಿ ಖುಷಿಯಿಂದಲೇ ತಾಯಿಯ ದೇಹದಾನ ಮಾಡಿದರು.
PublicNext
11/03/2026 03:48 pm