ಕಾಪು: ಭಾರತ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಹೆಸರು ಮಾಡಿದ, ಇದೀಗ ತಮ್ಮ ನಾಯಕತ್ವದಲ್ಲಿ ಚೊಚ್ಚಲ ವಿಶ್ವಕಪ್ ಸಾಧನೆ ಮಾಡಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಉಡುಪಿ ಜಿಲ್ಲೆಯೊಂದಿಗೆ ವಿಶೇಷ ನಂಟಿದೆ. ಅವರ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನವರು. ಹಾಗಾಗಿ ಸೂರ್ಯಕುಮಾರ್ ಯಾದವ್ ಉಡುಪಿಯ ಅಳಿಯ ಕೂಡ ಹೌದು.
ಕಾಪು ಮೂಲದ ದೇವಿಶಾ ಶೆಟ್ಟಿ ಕುಟುಂಬವು ಕಾಪು ಹೊಸಮಾರಿಗುಡಿಯ ದೇವಿಯ ಪರಮ ಭಕ್ತರಾಗಿದ್ದಾರೆ. ದೇವಿಶಾ ಕುಟುಂಬದ ಆರಾಧ್ಯಕ್ಷೇತ್ರವಾಗಿರುವ ಈ ದೇವಾಲಯಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ದಂಪತಿ ಈಗಾಗಲೇ ಎರಡು ಬಾರಿ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.
2024ರ ಜುಲೈ 9ರಂದು ಸೂರ್ಯಕುಮಾರ್ ಯಾದವ್ ದಂಪತಿ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಾಲಯದಲ್ಲಿ ನಡೆದ ಪೂಜೆಯ ವೇಳೆ ಅರ್ಚಕರು ಸೂರ್ಯಕುಮಾರ್ ಯಾದವ್ ಅವರಿಗೆ ಭಾರತೀಯ ತಂಡದ ಕ್ಯಾಪ್ಟನ್ ಆಗುವಂತೆ ಶುಭಹಾರೈಸಿದ್ದರು. ಆಶ್ಚರ್ಯ ಎಂಬಂತೆ , ಕೇವಲ ಒಂಬತ್ತು ದಿನಗಳಲ್ಲೇ, ಅಂದರೆ ಜುಲೈ 18ರಂದು ಅವರನ್ನು ಟಿ20 ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಘೋಷಿಸಲಾಯಿತು. ದೇವಿಯ ಸನ್ನಿಧಿಯಲ್ಲಿ ಆಡಿದ ಮಾತು ಸತ್ಯವಾಯಿತು ಎಂಬ ನಂಬಿಕೆ ಇಲ್ಲಿಯ ಭಕ್ತರಲ್ಲಿದೆ.
ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮರುನಿರ್ಮಾಣಗೊಂಡ ಕಾಪು ಹೊಸ ಮಾರಿಗುಡಿ ದೇವಾಲಯದ ನಿರ್ಮಾಣ ಕಾರ್ಯದಲ್ಲೂ ಸೂರ್ಯಕುಮಾರ್ ಯಾದವ್–ದೇವಿಶಾ ದಂಪತಿ ತಮ್ಮ ಕೊಡುಗೆ ನೀಡಿದ್ದಾರೆ. ದೇವಾಲಯದ ನಿರ್ಮಾಣ ವೇಳೆ ಅವರು ಕಂಬವನ್ನು ದಾನವಾಗಿ ನೀಡಿದ್ದರು.
ಎರಡು ದಿನಗಳ ಹಿಂದೆಯಷ್ಟೇ ಭಾರತೀಯ ಟಿ20 ತಂಡ ಐತಿಹಾಸಿಕ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು. ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್ ದಂಪತಿ ಮತ್ತೊಮ್ಮೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡುವ ನಿರೀಕ್ಷೆ ಇದೆ.ಭೇಟಿ ನೀಡಿದರೆ ದೇವಾಲಯದ ಪ್ರಮುಖರು ಅವರಿಂದ ಬೆಲ್ಲ ಮತ್ತು ಸಕ್ಕರೆ ತುಲಾಭಾರ ನೆರವೇರಿಸುವ ಸಂಕಲ್ಪವನ್ನೂ ಮಾಡಿಕೊಂಡಿದ್ದಾರೆ. ಕಾಪು ಹೊಸ ಮಾರಿಯಮ್ಮನ ಪವಾಡಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ ಎಂಬುದು ಭಕ್ತರ ಅಭಿಪ್ರಾಯ.
ಈ ಕುರಿತು ಮಾತನಾಡಿರುವ ಹೊಸ ಮಾರಿಗುಡಿಯ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ , ಕಳೆದ ಬಾರಿ ಅವರು ಕಾಪು ಮಾರಿಯಮ್ಮನ ದರ್ಶನಕ್ಕೆ ಬಂದಾಗ , ನೀವು ಭಾರತ ಟಿ20 ನಾಯಕ ಆಗಬೇಕು ಎಂದು ಹೇಳಿದ್ದೆವು.ಅದಕ್ಕೆ ಅವರು ಅದು ತುಂಬ ಕಷ್ಟ ಸಾಧ್ಯ. ತುಂಬ ಸ್ಪರ್ಧೆ ಇರುತ್ತದೆ ಎಂದಿದ್ದರು.ಆಗ ನಾವು ,ಹೊಸ ಮಾರಿಯಮ್ಮನ ಆಶೀರ್ವಾದ ನಿಮ್ಮ ಮೇಲೆ ಇದ್ದರೆ ಸಾಧ್ಯ ಎಂದು ಹೇಳಿದ್ದೆವು. ಸೂರ್ಯಕುಮಾರ್ ಕೂಡ ಅದಕ್ಕೆ ಹೌದು ಎಂಬಂತೆ ತಲೆ ಆಡಿಸಿದ್ದರು.ಈಗ ಅಂದುಕೊಂಡಂತೆಯೇ ಅವರು ನಾಯಕರಾಗಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.
PublicNext
11/03/2026 10:47 pm