ಮಂಗಳೂರು: ಇದೇ ಮೊದಲ ಬಾರಿಗೆ ಅಲ್ಟಿಮೇಟ್ ಫ್ರಿಸ್ಬಿ ಬೀಚ್ ನ್ಯಾಷನಲ್ಸ್ ರಾಷ್ಟ್ರೀಯ ಟೂರ್ನಮೆಂಟ್‌ಗೆ ಮಂಗಳೂರಿನ ತಣ್ಣೀರುಬಾವಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಚಾಲನೆ ದೊರಕಿದೆ.
ಅಮೆರಿಕಾ ಮೂಲದ ಈ ಕ್ರೀಡೆ ಭಾರತದಲ್ಲಿ ಇನ್ನೂ ಜನಪ್ರಿಯವಾಗಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ನಿಧಾನವಾಗಿ ಬೆಳೆಯುತ್ತಿದೆ.
ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿರುವ ಪಶ್ಚಿಮ ಕರಾವಳಿಯಲ್ಲಿ ಈ ರಾಷ್ಟ್ರೀಯ ಟೂರ್ನಮೆಂಟ್ ಇದೇ ಮೊದಲ ಬಾರಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಕ್ರೀಡಾಕೂಟಕ್ಕೆ ದೇಶದ ವಿವಿಧ ಭಾಗಗಳಿಂದ ಸುಮಾರು 25 ತಂಡಗಳು ಹಾಗೂ 500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಅಲ್ಟಿಮೇಟ್ ಫ್ರಿಸ್ಬಿ ವೇಗ, ತಂತ್ರ ಹಾಗೂ ತಂಡದ ಸಹಕಾರವನ್ನು ಒಳಗೊಂಡಿರುವ ಹೈ ಇಂಟೆನ್ಸಿಟಿ ಕ್ರೀಡೆ. ಒಂದು ತಂಡದಲ್ಲಿ 15 ಆಟಗಾರರು ಇದ್ದರೂ, ಮೈದಾನದಲ್ಲಿ ಒಂದೇ ಸಮಯದಲ್ಲಿ ಪ್ರತಿ ತಂಡದಿಂದ ಐದು ಮಂದಿ ಮಾತ್ರ ಆಡುತ್ತಾರೆ.
ಗರಿಷ್ಠ 45 ನಿಮಿಷಗಳ ಕಾಲ ನಡೆಯುವ ಪಂದ್ಯದಲ್ಲಿ ಅಧಿಕ ಅಂಕ ಗಳಿಸಿದ ತಂಡ ಗೆಲುವು ಸಾಧಿಸುತ್ತದೆ. ಆದರೆ ಆ ಸಮಯದೊಳಗೆ ಯಾವುದಾದರೂ ತಂಡ 13 ಅಂಕಗಳನ್ನು ಗಳಿಸಿದರೆ ತಕ್ಷಣವೇ ಆ ತಂಡವನ್ನು ಜಯಶಾಲಿಯೆಂದು ಘೋಷಿಸಲಾಗುತ್ತದೆ. ಈ ಕ್ರೀಡೆಯ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ರೆಫ್ರಿ ಅಥವಾ ಅಂಪೈರ್‌ಗಳಿಲ್ಲ. ಆಟಗಾರರು ತಾವೇ ನಿಯಮಗಳನ್ನು ಪಾಲಿಸಿಕೊಂಡು ಆಟವನ್ನು ಮುಂದುವರಿಸುತ್ತಾರೆ.
ಮಂಗಳೂರಿನ ಬೀಚ್‌ನಲ್ಲಿ ನಡೆಯುತ್ತಿರುವ ಈ ಟೂರ್ನಮೆಂಟ್‌ನಲ್ಲಿ ಓಪನ್ ಹಾಗೂ ಮಹಿಳಾ ವಿಭಾಗಗಳಿವೆ. ಬೀಚ್‌ನಲ್ಲಿ ಮರಳು ಮತ್ತು ಗಾಳಿ ಮುಂತಾದ ಅಂಶಗಳು ಆಟಗಾರರಿಗೆ ಹೆಚ್ಚುವರಿ ಸವಾಲು ತರುತ್ತವೆ. ಬೆಳಗ್ಗೆ 6.30ರಿಂದ 10.30ರವರೆಗೆ ಹಾಗೂ ಸಂಜೆ 3.30ರಿಂದ 6.30ರವರೆಗೆ ಪಂದ್ಯಾಟಗಳನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಕರಾವಳಿ ಭಾಗದಲ್ಲಿ ಈ ಕ್ರೀಡೆಗೆ ಹೊಸ ಪರಿಚಯ ನೀಡಿದೆ.
PublicNext
08/03/2026 01:21 pm