ಮಂಗಳೂರು: ರಂಜಾನ್ ಉಪವಾಸ ಸಂದರ್ಭ ರಕ್ತದಾನ ಶಿಬಿರಗಳು ಕಡಿಮೆಯಾಗುತ್ತವೆ. ಪರಿಣಾಮ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಎದುರಾಗುತ್ತದೆ. ಆದರೆ ರೋಗಿಗಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ‘ಬ್ಲಡ್ ಡೋನರ್ಸ್ ಮಂಗಳೂರು’ ತಂಡ ಉಪವಾಸದ ನಡುವೆಯೂ ರಕ್ತದಾನವನ್ನು ಮುಂದುವರಿಸುತ್ತಿದೆ.
ಕಳೆದ ಸುಮಾರು 13ವರ್ಷಗಳಿಂದ ‘ಬ್ಲಡ್ ಡೋನರ್ಸ್ ಮಂಗಳೂರು’ ಸಂಘಟನೆ ರಕ್ತದಾನ ಮಾಡುತ್ತಿದೆ. ಮಂಗಳೂರಿನಲ್ಲಿ ಆರಂಭವಾದ ಈ ಸೇವಾ ಚಟುವಟಿಕೆ ಇದೀಗ ರಾಜ್ಯ, ರಾಷ್ಟ್ರವಲ್ಲದೇ ಗಲ್ಫ್ ರಾಷ್ಟ್ರಗಳಲ್ಲಿಯೂ ವಿಸ್ತರಿಸಿದೆ. ಸಂಘಟನೆಯ ಸಾವಿರಾರು ಸದಸ್ಯರಲ್ಲಿ 200 ಮಂದಿ ಸಕ್ರಿಯವಾಗಿ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ರಂಜಾನ್ ತಿಂಗಳಲ್ಲಿ ಉಪವಾಸ ಇರುವುದರಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸುವುದು ಸುಲಭವಲ್ಲ. ಯಾಕೆಂದರೆ ಉಪವಾಸ ಮಾಡಿದವರು ರಕ್ತ ಕೊಟ್ಟಲ್ಲಿ ನಿಶ್ಶಕ್ತರಾಗಿ ತಲೆ ತಿರುಗುವ ಅಪಾಯ ಎದುರಾಗುತ್ತದೆ. ಆದ್ದರಿಂದ ಉಪವಾಸದ ನಡುವೆ ರಕ್ತದಾನ ಮಾಡಲು ಯಾರೂ ಮುಂದೆ ಬರುವುದಿಲ್ಲ. ಪರಿಣಾಮ ಈ ಸಂದರ್ಭ ರಕ್ತದ ಕೊರತೆ ಎದುರಾಗುತ್ತದೆ. ಇದನ್ನು ಮನಗಂಡು ಸಂಘಟನೆಯ ಸದಸ್ಯರು ಉಪವಾಸ ತೊರೆದ ಬಳಿಕ ಸಂಜೆ ವೇಳೆ ದಾನಿಗಳನ್ನು ಸಂಪರ್ಕಿಸಿ ಬ್ಲಡ್ ಬ್ಯಾಂಕ್‌ಗಳಿಗೆ ಕರೆದೊಯ್ದು ರಕ್ತದಾನ ಮಾಡಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಈ ಬಾರಿ ಈವರೆಗೆ ನಡೆದ ಉಪವಾಸದ ಅವಧಿಯಲ್ಲಿ ಸುಮಾರು ನೂರರಷ್ಟು ದಾನಿಗಳು ರಕ್ತದಾನ ಮಾಡಿದ್ದು, 150ರಷ್ಟು ಯೂನಿಟ್ ರಕ್ತವನ್ನು ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾಗಿದೆ.
ರಂಜಾನ್ ಉಪವಾಸದ ನಡುವೆಯೂ ರಕ್ತದಾನದಲ್ಲಿ ತೊಡಗಿರುವ ಈ ಯುವಕರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮಾನವೀಯತೆ ಮತ್ತು ಸೇವಾಭಾವದ ಸಂಕೇತವಾಗಿ ಕಾರ್ಯನಿರ್ವಹಿಸುತ್ತಿರುವ ‘ಬ್ಲಡ್ ಡೋನರ್ಸ್ ಮಂಗಳೂರು’ ತಂಡದ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ.
ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
PublicNext
13/03/2026 05:09 pm