ಮಂಗಳೂರು: ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ 'ಯಕ್ಷ ದಶಾವತಾರಿ' ಸೂರಿಕುಮೇರು ಕೆ.ಗೋವಿಂದ ಭಟ್(88) ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ಸಮಯಗಳಿಂದ ತೀರ್ಥಹಳ್ಳಿಯ ಪುತ್ರನ ಮನೆಯಲ್ಲಿದ್ದರು. ಇದೀಗ ಅವರು ಅಲ್ಲಿಯೇ ಮೃತರಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
1938ರಂದು ಬಂಟ್ವಾಳ ತಾಲೂಕಿನಲ್ಲಿ ಜನಿಸಿದ ಇವರು ಏಳನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರು. 1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಯಾದ ಇವರನ್ನು ಯಕ್ಷ ಗುರುಗಳಾಗಿ ಕುರಿಯ ವಿಠಲ ಶಾಸ್ತ್ರಿಯವರು ತಿದ್ದಿದರು. ನಾಟ್ಯ ಗುರುಗಳಾಗಿ ಪರಮಶಿವನ್ ಮಾಧವ ಮೆನನ್ ಹಾಗೂ ರಾಜನ್ ಅಯ್ಯರ್ ಅವರುಗಳು ಪಕ್ವಗೊಳಿಸಿದರು.
ಕೌರವ, ರಕ್ತಬೀಜ, ಇಂದ್ರಜಿತು, ಮಾಗಧ, ಜರ್ಣ, ಅತಿಕಾಯ, ನರಕಾಸುರ, ತಾಮ್ರಾಕ್ಷ, ಹಿರಣ್ಯಕಶಿಪು ಮುಂತಾದ ಎದುರು ವೇಷಗಳಲ್ಲೇ ಪ್ರಸಿದ್ಧರೆನಿಸಿದ ಕೆ.ಗೋವಿಂದ ಭಟ್ ಅವರು, ಅರ್ಜುನ, ಹನುಮಂತ, ಭೀಷ್ಮ, ವಿಶ್ವಾಮಿತ್ರ ಇಂತಹ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಜನಮೆಚ್ಚುಗೆ ಗಳಿಸಿದ್ದರು. ಧರ್ಮಸ್ಥಳ, ಮುಲ್ಕಿ, ಕೂಡ್ಲು, ಸುರತ್ಕಲ್ ಹಾಗೂ ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ಮಾಡಿದ್ದರು. ಬರೋಬ್ಬರಿ 70 ವರ್ಷಗಳ ಕಾಲ ಅವರು ಮೇಳಗಳ ತಿರುಗಾಟ ಮಾಡಿ ಕೆಲ ವರ್ಷಗಳಿಂದ ಯಕ್ಷಗಾನದಿಂದ ದೂರವಿದ್ದು ವಿಶ್ರಾಂತ ಜೀವನದಲ್ಲಿದ್ದರು.
ತಮ್ಮ ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು ಸಿದ್ಧಹಸ್ತರು. ಅವರ ನಿಧನದಿಂದ ಯಕ್ಷಗಾನದ ಒಂದು ಸುವರ್ಣ ಯುಗವೇ ಅಂತ್ಯಗೊಂಡಂತಾಗಿದೆ.
ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಪುರಸ್ಕಾರ ಸಂದಾಯವಾಗಿದೆ.
PublicNext
20/03/2026 10:14 pm