ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೂಜಿನ ಚಟಕ್ಕೆ ಸಿಲುಕಿ ಬೆಳ್ಳಿ ಕದ್ದ ನೌಕರ - ಮಾಲೀಕನಿಗೆ ₹35 ಲಕ್ಷ ವಂಚನೆ

ಬೆಂಗಳೂರು: ಆನ್‌ಲೈನ್ ಜೂಜಿನ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಹಲಸೂರು ಗೇಟ್ ಪೊಲೀಸರು ಭೇದಿಸಿದ್ದಾರೆ.

ತಾನು ಕೆಲಸ ಮಾಡುತ್ತಿದ್ದ ಆಭರಣ ಪಾಲಿಷ್ ಅಂಗಡಿಯಿಂದ 35 ಲಕ್ಷ ರೂ. ಮೌಲ್ಯದ ಬರೋಬ್ಬರಿ 10.12 ಕೆ.ಜಿ. ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ನರೇಂದ್ರ ಎಂಬ ಆರೋಪಿಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ಆತನಿಗೆ ಕಳ್ಳತನದ ಬೆಳ್ಳಿ ಮಾರಾಟ ಮಾಡಲು ಸಹಾಯ ಮಾಡಿದ್ದ ಮತ್ತೊಬ್ಬ ಆರೋಪಿ ಕುಲದೀಪ್‌ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ನರೇಂದ್ರ, ನಗರದ ಧನಲಕ್ಷ್ಮಿ ರೋಡಿಯಂ ಎಂಬ ಆಭರಣ ಪಾಲಿಷ್ ಅಂಗಡಿಯಲ್ಲಿ ಸುಮಾರು ಒಂದು ತಿಂಗಳಿನಿಂದ ಕೆಲಸ ಮಾಡುತ್ತಿದ್ದ. ಬೆಳ್ಳಿ ಅಂಗಡಿಗಳಿಂದ ಆಭರಣಗಳನ್ನು ಪಡೆದು ಅವುಗಳಿಗೆ ಪಾಲಿಷ್ ಮಾಡುವ ಕೆಲಸವನ್ನು ಈ ಅಂಗಡಿ ನಿರ್ವಹಿಸುತ್ತಿತ್ತು.

ಆನ್‌ಲೈನ್ ಜೂಜಿನಲ್ಲಿ ಹಣ ಕಳೆದುಕೊಂಡು ತೀವ್ರ ನಷ್ಟದಲ್ಲಿದ್ದ ನರೇಂದ್ರ, ಒಮ್ಮೆ 10 ಲಕ್ಷ ರೂ. ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿದ್ದ. ಇದೇ ಕಾರಣಕ್ಕೆ ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿದ್ದ ಬೆಳ್ಳಿಯನ್ನು ಕದಿಯಲು ಸಂಚು ರೂಪಿಸಿದ್ದ. ಅಂಗಡಿಯ ಕೀಲಿ ಕೈ ತನ್ನ ಬಳಿ ಇದ್ದುದರಿಂದ ಸುಲಭವಾಗಿ ಬಾಗಿಲು ತೆರೆದು ಕಳ್ಳತನ ಮಾಡಿದ್ದಾನೆ.

ಕಳ್ಳತನ ಮಾಡಿದ ನಂತರ ನರೇಂದ್ರ ರೈಲಿನ ಮೂಲಕ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದ. ಅಲ್ಲಿ ತನ್ನ ಸ್ನೇಹಿತ ಕುಲದೀಪ್ ಎಂಬಾತನೊಂದಿಗೆ ಸೇರಿಕೊಂಡು ಸುಮಾರು 3 ಕೆ.ಜಿ. ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಿದ್ದಾನೆ. ಮಾರಾಟದಿಂದ ಬಂದ ಹಣದಲ್ಲಿ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಹಾಗೂ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಸುತ್ತಾಟ ನಡೆಸಿದ್ದಾನೆ.

ಕದ್ದ ಬೆಳ್ಳಿ ಮಾರಾಟ ಮತ್ತು ಜೂಜಿನಲ್ಲಿ ಯಶಸ್ಸು ಸಿಗಲೆಂದು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಉಳಿದ ಬೆಳ್ಳಿಯನ್ನು ಸಹ ಮಾರಾಟ ಮಾಡಲು ಆತ ಯೋಜನೆ ರೂಪಿಸಿದ್ದ ಎನ್ನಲಾಗಿದೆ.

ಕಳ್ಳತನದ ಬಗ್ಗೆ ಮಾಹಿತಿ ಪಡೆದ ಹಲಸೂರು ಗೇಟ್ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತಾಂತ್ರಿಕ ಮಾಹಿತಿ ಮತ್ತು ಖಚಿತ ಸುಳಿವು ಆಧರಿಸಿ ರಾಜಸ್ಥಾನದಲ್ಲಿದ್ದ ನರೇಂದ್ರ ಮತ್ತು ಆತನಿಗೆ ಮಾರಾಟ ಮಾಡಲು ಸಹಾಯ ಮಾಡಿದ್ದ ಕುಲದೀಪ್ ಎಂಬಿಬ್ಬರನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತರಿಂದ ಒಟ್ಟು 35 ಲಕ್ಷ ರೂ. ಮೌಲ್ಯದ 10.12 ಕೆ.ಜಿ. ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ.

ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Edited By : Somashekar
PublicNext

PublicNext

18/03/2026 05:07 pm

Cinque Terre

11.66 K

Cinque Terre

0

ಸಂಬಂಧಿತ ಸುದ್ದಿ