ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: ವೃದ್ಧರ ಮನೆಯಲ್ಲಿ ಕಳ್ಳತನ - ನಂಬಿಕೆ ದ್ರೋಹ ಮಾಡಿದ ಕೇರ್ ಟೇಕರ್ ಅಂದರ್!

ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್ ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಮಡಿಕೇರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ (27) ಎಂದು ಗುರುತಿಸಲಾಗಿದೆ. ಈತನಿಂದ 5,09,000 ರೂ. ನಗದು, 137 ಗ್ರಾಂ ಚಿನ್ನಾಭರಣಗಳು ಹಾಗೂ ಒಂದು ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೃತ್ಯದ ವಿವರ ಹಾಗೂ ತನಿಖೆ

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಹಿಂಭಾಗದ ಬಡಾವಣೆಯ ನಿವಾಸಿ ಪಾರ್ಥಸಾರಥಿ ಅವರ ಅಣ್ಣ ವಯೋವೃದ್ಧರಾಗಿದ್ದು, ಅವರನ್ನು ನೋಡಿಕೊಳ್ಳಲು ಕೇರ್ ಟೇಕರ್ ಆಗಿ ಕೊಪ್ಪಳ ಜಿಲ್ಲೆ ಮೂಲದವನೆಂದು ಹೇಳಿಕೊಂಡು ವ್ಯಕ್ತಿಯೊಬ್ಬನನ್ನು ನೇಮಿಸಲಾಗಿತ್ತು. ಈತ ಫೆಬ್ರವರಿ 28 ರಂದು ಮನೆಯಲ್ಲಿದ್ದ ಸುಮಾರು 80 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 5,50,000 ರೂ. ನಗದನ್ನು ಕಳವು ಮಾಡಿದ್ದಾನೆ ಎಂದು ಆರೋಪಿಸಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೂಡಲೇ, ಹಿರಿಯ ಅಧಿಕಾರಿಗಳು, ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿ ಹಾಗೂ ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ, ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಂಡಿತ್ತು.

ಆರೋಪಿಯ ಗುರುತು ಪತ್ತೆ ಹಾಗೂ ಇತರೆ ಪ್ರಕರಣಗಳು

ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತಾಂತ್ರಿಕ ಮಾಹಿತಿ ಮತ್ತು ಸೂಕ್ಷ್ಮ ವಿಚಾರಣೆ ಮೂಲಕ ಆರೋಪಿ ಭದ್ರಪ್ಪ ಬಸಪ್ಪ ಹಡಪದ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯಲ್ಲಿ, ಈತ ಮಹಾಂತೇಶ ಪೂಜಾರ ಎಂಬುವವರ ಆಧಾರ್ ಕಾರ್ಡ್ ಪ್ರತಿಯನ್ನು ಬಳಸಿ ಹೋಂ ನರ್ಸಿಂಗ್ ಕೆಲಸಕ್ಕೆ ಸೇರಿರುವುದು ಹಾಗೂ 2025ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಕೆ.ಟಿ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾದವರು

ಈ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಸೂರಜ್ ಪಿ.ಎ., ಮಡಿಕೇರಿ ನಗರ ವೃತ್ತದ ಸಿಪಿಐ ರಾಜು ಪಿ.ಕೆ., ಬೆರಳು ಮುದ್ರೆ ಘಟಕದ ಪಿಐ ರಾಮಕೃಷ್ಣ, ಮಡಿಕೇರಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಅನ್ನಪೂರ್ಣ ಎಸ್.ಎಸ್., ಎಎಸ್‌ಐ ರಾಮಪ್ಪ, ಸಿಬ್ಬಂದಿಗಳಾದ ಪ್ರಭಾಕರ್, ಗಿರೀಶ್, ಕಿರಣ್, ಕೃಷ್ಣಮೂರ್ತಿ, ಸುಧೀರ್, ಮುನೀರ್, ರಂಜಿತ್, ಪ್ರದೀಪ್, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಶರತ್ ರೈ, ಫಾರೆನ್ಸಿಕ್ ವಿಭಾಗದ ಜಯಕುಮಾರ್, ಸಂತೋಷ, ಡಿಸಿಆರ್‌ಬಿ ವಿಭಾಗದ ಪ್ರವೀಣ್ ಹಾಗೂ ನಿರಂಜನ್ ಪಾಲ್ಗೊಂಡಿದ್ದರು.

Edited By : PublicNext Desk
PublicNext

PublicNext

18/03/2026 06:02 pm

Cinque Terre

5.06 K

Cinque Terre

0