ಗದಗ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ನ್ಯಾಯಾಂಗ ಸದಸ್ಯರಾದ ಎಸ್.ಕೆ. ವಂಟಿಗೊಡಿ ಅವರು ಮಾರ್ಚ್ 12 ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಶಾಲೆಯ ಕಾರ್ಯನಿರ್ವಹಣೆ ಮತ್ತು ಸೌಲಭ್ಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು.
ವಸತಿ ಶಾಲೆಗೆ ಆಗಮಿಸಿದ ಎಸ್.ಕೆ. ವಂಟಿಗೊಡಿ ಅವರು ಭೋಜನಾಲಯಕ್ಕೆ ಭೇಟಿ ನೀಡಿ ಅಡುಗೆ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ವಸತಿ ಶಾಲೆಯಲ್ಲಿ ದಿ 28-07-2025 ರಂದು ನಡೆದ ಘಟನೆಯಿಂದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಊಟದ ತೊಂದರೆ ಉಂಟಾಗಿರುವ ಕುರಿತು ಹೇಳುತ್ತಾ ಇನ್ನು ಮುಂದೆ ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದರು.
ಊಟದ ರುಚಿಯನ್ನು ಸ್ವತಃ ಪರೀಕ್ಷಿಸಿ, ಮೆನು ಚಾರ್ಟ್ ಪ್ರಕಾರ ರುಚಿಯಾದ, ಶುಚಿಯಾದ ಮತ್ತು ಪೌಷ್ಟಿಕ ಆಹಾರವನ್ನು ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಂತರ ದಾಸ್ತಾನು ಕೊಠಡಿಯಲ್ಲಿ ಆಹಾರ ಧಾನ್ಯಗಳನ್ನು ಪರಿಶೀಲಿಸಿದರು.ವಿದ್ಯಾರ್ಥಿನಿಲಯದ ಪ್ರತಿ ಕೊಠಡಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳ ಸಂಖ್ಯೆ, ಫ್ಯಾನ್, ಲೈಟ್ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ಶೌಚಾಲಯಗಳ ಸ್ವಚ್ಛತೆಯನ್ನು ವೀಕ್ಷಿಸಿದರು.
ಎಲ್ಲವೂ ಸರಿ ಇರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ವಿದ್ಯಾರ್ಥಿನಿಯರಿಗೆ ಬಿಸಿ ನೀರಿನ ಸೌಲಭ್ಯ ಗಳ ಬಗ್ಗೆ ಕೇಳಿದಾಗ ಪ್ರಾಂಶುಪಾಲರು ಸೋಲಾರ ವ್ಯವಸ್ಥೆ ಇರುವುದಾಗಿ ತಿಳಿಸಿದರು. ಶಾಲೆಯಲ್ಲಿ ಸೋಲಾರ್ ವ್ಯವಸ್ಥೆ ಇದ್ದರೂ, ಮಳೆಗಾಲದಲ್ಲಿ ಬಿಸಿನೀರಿನ ತೊಂದರೆಯಾಗದಂತೆ ಗೀಸರ್‌ಗಳನ್ನು ಅಳವಡಿಸಲು ಸೂಚಿಸಿದರು. ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ವಿಟಮಿನ್-ಸಿ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಂಡರು.
ವಿದ್ಯುತ್ ವ್ಯತ್ಯಯವಾದಾಗ ಯುಪಿಎಸ್ ಹಾಗೂ ಜನರೇಟರ್ ಬಳಕೆ ಮಾಡುವ ಬಗ್ಗೆ ಮಾಹಿತಿ ಪಡೆದರು.ವಸತಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಸಿಮೆಂಟ್ ಬೆಂಚುಗಳನ್ನು ಹಾಕಿಸಲು ಹಾಗೂ ಶಾಲೆಯ ಆವರಣವನ್ನು ಇನ್ನಷ್ಟು ಸುಂದರಗೊಳಿಸಲು ಗಿಡಗಳನ್ನು ನೆಟ್ಟು ಪೋಷಿಸುವಂತೆ ತಿಳಿಸಿದರು. ಸಿ.ಸಿ. ಕ್ಯಾಮರಾ ಅಳವಡಿಸಿರುವ ಬಗ್ಗೆ ಮಾಹಿತಿಯನ್ನು ಪಡೆಯುತ್ತಾ ವಸತಿ ಶಾಲೆಯ ಸುತ್ತಮುತ್ತಲಿನ ಪ್ರದೇಶವನ್ನು ಕಾಣಿಸುವಂತೆ ಸಿ.ಸಿ. ಕ್ಯಾಮರಾ ಅಳವಡಿಸಲು ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು. ವಸತಿ ಶಾಲೆಯ ಪಾಲಕರು ತಮ್ಮ ಮಕ್ಕಳ ಭೇಟಿಗಾಗಿ ಬಂದಾಗ ಮಕ್ಕಳೊಂದಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಟ್ಟಡದ ವ್ಯವಸ್ಥೆ ಮಾಡಿದರೆ ವಸತಿ ಶಾಲೆಯಲ್ಲಿ ಜರುಗುವ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ. ವಸತಿ ಶಾಲೆಯು ಬಾಲಕಿಯರ ವಸತಿ ಶಾಲೆಯಾಗಿರುವುದರಿಂದ ಕಂಪೌಂಡ್ ಅವಶ್ಯಕವಿದ್ದು , ಸಿ.ಸಿ.ರಸ್ತೆ ಇವೆಲ್ಲವುಗಳ ಕುರಿತು ಬೇಡಿಕೆಯನ್ನು ಸಲ್ಲಿಸಿದಲ್ಲಿ ಮಾನ್ಯರು ಕೇಂದ್ರ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬೇಗನೆ ಸರಿಪಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ನಂದಾ ಹಣಬರಟ್ಟಿ, ಶಿರಹಟ್ಟಿ ತಹಶೀಲ್ದಾರ್ ರಾಘವೇಂದ್ರ ರಾವ್, ಪಿ.ಎಸ್‌ಐ ಆಯ್. ಆರ್. ರೀತ್ತಿ, ಇ. ಓ ರಾಮಣ್ಣ ದೊಡ್ಮನಿ, ಬಿ.ಇ. ಓ ನಾಣ್ಕಿ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲ ಲಮಾಣಿ, ಗದಗ ಜಿಲ್ಲಾ ವಸತಿ ಶಾಲೆಗಳ ಮತ್ತು ಕಾಲೇಜು ಜಿಲ್ಲಾ ಸಮನ್ವಯ ಅಧಿಕಾರಿ ಹಾಗೂ ಪ್ರಾಂಶುಪಾಲರು ಶ್ರೀಮತಿ ಸುನೀತಾ ವಾಲಿಶೆಟ್ಟರ್ ಹಾಗೂ ವಸತಿ ಶಾಲೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
18/03/2026 08:46 pm