ಗದಗ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಉದ್ಯೋಗಾಧಾರಿತ ಶಿಕ್ಷಣ ಅತ್ಯಗತ್ಯವಾಗಿದೆ. ವೃತ್ತಿ ಮಾರ್ಗದರ್ಶನ ಪಡೆದವರಿಗೆ ಈ ಹಾದಿ ಸುಗಮವಾಗುತ್ತದೆ. ಇಂತಹ ಸುಂದರ ಭವಿಷ್ಯಕ್ಕೆ ಈ ಕೆರಿಯರ್ ಮೇಳ ಪೂರಕವಾಗಲಿ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಗ್ರ ಶಿಕ್ಷಣ ಕರ್ನಾಟಕ (ಬೆಂಗಳೂರು), ಶಾಲಾ ಶಿಕ್ಷಣ ಇಲಾಖೆ ಹಾಗೂ ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಮಾರ್ಚ್ 20) ಡಯಟ್ ಆವರಣದಲ್ಲಿ ಆಯೋಜಿಸಲಾಗಿದ್ದ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉದ್ದೇಶಿತ 'ಕೆರಿಯರ್ ಮೇಳ-2026' ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಸಮರ್ಥವಾಗಿ ರೂಪಿಸಿಕೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳ ಡಯಟ್‌ಗಳಲ್ಲಿ ವೃತ್ತಿ ಮಾರ್ಗದರ್ಶನ ಘಟಕಗಳನ್ನು ತೆರೆಯುವಂತೆ ಸರ್ಕಾರ ಆದೇಶಿಸಿದೆ. ಅದರನ್ವಯ ಗದಗಿನಲ್ಲಿಯೂ ಈ ಘಟಕವನ್ನು ಇಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಜಿಲ್ಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಘಟಕದಲ್ಲಿ ಲಭ್ಯವಿರುವ ವಿಷಯ ತಜ್ಞರೊಂದಿಗೆ ಸಮಾಲೋಚಿಸಿ ಮಾರ್ಗದರ್ಶನ ಪಡೆಯಬೇಕು. ಅಲ್ಲದೆ, ವೃತ್ತಿ ಮಾರ್ಗದರ್ಶನಕ್ಕೆ ಪೂರಕವಾದ ಅಮೂಲ್ಯ ಗ್ರಂಥಗಳು, ಉನ್ನತ ಕೋರ್ಸ್‌ಗಳ ಅಧ್ಯಯನಕ್ಕೆ ಅಗತ್ಯವಾದ ಪುಸ್ತಕಗಳು ಇಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯವೂ ಇದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆಯುವಂತೆ ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಮೇಳದ ಆಕರ್ಷಣೆಗಳು
ಗದಗ ಜಿಲ್ಲಾ ಚಿತ್ರಕಲಾ ಶಿಕ್ಷಕರಿಂದ ಆಯೋಜಿಸಲಾಗಿದ್ದ ಚಿತ್ರಪ್ರದರ್ಶನ, ವಿವಿಧ ಇಲಾಖೆಗಳ ಯೋಜನೆಗಳ ಕುರಿತ ಮಳಿಗೆಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವಿಜ್ಞಾನ ಮತ್ತು ಗಣಿತ ಪ್ರಯೋಗಗಳ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು.
PublicNext
20/03/2026 08:10 pm