ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಹಾಗೂ ಕಸ್ಕೆಬೈಲು ಗ್ರಾಮಗಳಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಳೆದ 15 ದಿನಗಳಿಂದ ಓಡಾಟ ನಡೆಸುತ್ತಿದೆ.
ಈ ಹಿಂಡಿನಲ್ಲಿ ಆನೆಗಳು ತಮ್ಮ ಮರಿಗಳನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸುತ್ತಾ ಸಾಗುತ್ತಿರುವ ಅಪರೂಪದ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿವೆ. ತಾಯಿ ಆನೆಯು ತನ್ನ ಮರಿಗಳಿಗೆ ಸೂಚನೆ ನೀಡುತ್ತಾ, ಸುರಕ್ಷಿತವಾಗಿ ತನ್ನ ಹಿಂದೆಯೇ ಬರುವಂತೆ ಹಾಗೂ ಎಲ್ಲಿಯೂ ಗುಂಪು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ ಕರೆದೊಯ್ಯುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ.
ಈ ಆನೆಗಳ ಹಿಂಡು ಈ ಭಾಗದ ತೋಟಗಳಲ್ಲಿ ಸಂಚರಿಸುತ್ತಿರುವುದರಿಂದ ಅಪಾರ ಪ್ರಮಾಣದ ಗಿಡಗಳು ಕಾಫಿ, ಅಡಿಕೆ, ಬಾಳೆ ಗಿಡಗಳು ನಾಶವಾಗಿದ್ದು, ಬೆಳೆಗಾರರಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ.
ಪ್ರತಿನಿತ್ಯದ ಆನೆ ಹಾವಳಿಯಿಂದ ಈ ಭಾಗದ ಗ್ರಾಮಸ್ಥರು ಕಂಗೆಟ್ಟಿದ್ದು, ಆನೆಗಳ ಭಯದಿಂದಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯರು ಈ ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಮತ್ತು ಆನೆ ಹಾವಳಿಗೆ ಬ್ರೇಕ್ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
PublicNext
19/03/2026 04:08 pm
LOADING...