ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲೆನಾಡಲ್ಲಿ ಆಲಿಕಲ್ಲು ಮಳೆಯ ಅಬ್ಬರ - ಯುಗಾದಿಯ ಹಸಿರಿನ ನಡುವೆ ಕಾಫಿ ಬೆಳೆಗಾರರ ಬದುಕು ಕಂಗಾಲು!

ಚಿಕ್ಕಮಗಳೂರು: ಯುಗಾದಿ ಹಬ್ಬದ ಆಗಮನದೊಂದಿಗೆ ಪ್ರಕೃತಿಯು ಹೊಸ ಚಿಗುರಿನಿಂದ ಹಸಿರಾಗಿ ಕಂಗೊಳಿಸಬೇಕಾದ ಈ ಸುಂದರ ಸಮಯದಲ್ಲಿ, ಆಲಿಕಲ್ಲು ಸಹಿತ ವರುಣನ ಆರ್ಭಟ ಕಾಫಿ ಬೆಳೆಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಆಲಿಕಲ್ಲು ಸಹಿತ ಧಾರಾಕಾರ ಮಳೆ, ಕೃಷಿಕರ ನಿರೀಕ್ಷೆಗಳ ಮೇಲೆ ಚಪ್ಪಡಿ ಎಳೆದಂತಾಗಿದೆ. ಹಸಿರಿನ ಸಿರಿಯ ನಡುವೆ ಸಂಭ್ರಮಿಸಬೇಕಿದ್ದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಸತತ ಬಿಸಿಲಿನ ತಾಪದಿಂದ ಕಾಫಿ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಬೆಳೆಗಾರರು ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿ ಗಿಡಗಳನ್ನು ಪೋಷಿಸುತ್ತಿದ್ದ ಹೊತ್ತಿನಲ್ಲಿ, ಈ ಅನಿರೀಕ್ಷಿತ ಆಲಿಕಲ್ಲು ಮಳೆ ಬರಸಿಡಿಲಿನಂತೆ ಎರಗಿದೆ.

ವಾರದ ಹಿಂದಷ್ಟೇ ಕಾಫಿ ಗಿಡಗಳಲ್ಲಿ ಮಲ್ಲಿಗೆಯಂತೆ ಹೂವುಗಳು ಅರಳಿ ನಿಂತಿದ್ದವು. ಮುಂದಿನ ವರ್ಷದ ಬಂಪರ್ ಫಸಲಿನ ಕನಸು ಕಾಣುತ್ತಿದ್ದ ಬೆಳೆಗಾರರಿಗೆ ಆಲಿಕಲ್ಲಿನ ಹೊಡೆತಕ್ಕೆ ಕಾಫಿ ಗಿಡಗಳು ನಲುಗಿ ಹೋಗಿವೆ. ಇದು ಮುಂದಿನ ಇಡೀ ವರ್ಷದ ಇಳುವರಿಯನ್ನೇ ಇಲ್ಲದಂತೆ ಮಾಡುವ ಆತಂಕ ಎದುರಾಗಿದೆ. ​

ಕೇವಲ ಕಾಫಿ ಮಾತ್ರವಲ್ಲದೆ, ಅಡಿಕೆ, ಬಾಳೆ ಹಾಗೂ ಮಾವು ಕೂಡ ಪ್ರಕೃತಿಯ ವಿಕೋಪಕ್ಕೆ ತುತ್ತಾಗಿವೆ. ಕೈಗೆ ಬಂದ ತರಕಾರಿ ಬೆಳೆಗಳು ಆಲಿಕಲ್ಲಿನ ಪ್ರಹಾರಕ್ಕೆ ಜಜ್ಜುಗುಜ್ಜಾಗಿದ್ದು, ರೈತರ ಶ್ರಮವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಕಾರ್ಯಪ್ರವೃತ್ತರಾಗಿ, ಬೆಳೆ ಹಾನಿಯ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಘೋಷಿಸುವ ಮೂಲಕ ಬೆಳೆಗಾರರ ನೆರವಿಗೆ ಧಾವಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

Edited By :
PublicNext

PublicNext

19/03/2026 05:56 pm

Cinque Terre

12.82 K

Cinque Terre

0

ಸಂಬಂಧಿತ ಸುದ್ದಿ