ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿಎಂ ಸಿದ್ದರಾಮಯ್ಯ ಬದಲಾವಣೆಯ ಮುನ್ಸೂಚನೆ ನೀಡಿದ ಭವಿಷ್ಯ ಹೇಳುವ ಬೊಂಬೆ

ಧಾರವಾಡ: ಎಸ್.. ಇದನ್ನ ನಾವು ಹೇಳ್ತಿಲ್ಲ. ನೂರಾರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿರುವ ಬೊಂಬೆ ಭವಿಷ್ಯ ಹೇಳುತ್ತಿದೆ.

ಹೌದು! ಪ್ರತಿವರ್ಷ ಯುಗಾದಿ ಹಬ್ಬದ ಅಮವಾಸ್ಯೆಯಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮದ ಹಿರಿಯರು ಈ ಬೊಂಬೆ ಭವಿಷ್ಯದ ಫಲ ಹಾಕುತ್ತ ಬಂದಿದ್ದಾರೆ. ಈ ಬೊಂಬೆಗಳು ನುಡಿದ ಭವಿಷ್ಯ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಿಜ ಕೂಡ ಆಗಿವೆ.

ಯುಗಾದಿ ಅಮವಾಸ್ಯೆಯಂದು ಪೂರ್ವಕ್ಕೆ ಹರಿಯುವ ಹಳ್ಳದಲ್ಲಿ ಹನುಮನಕೊಪ್ಪ ಗ್ರಾಮದ ಹಿರಿಯರು ಫಲ ಹಾಕಿ ಬರುತ್ತಾರೆ. ಮಣ್ಣಿನಿಂದ ಗದ್ದುಗೆ ನಿರ್ಮಾಣ ಮಾಡಿ ನಾಲ್ಕೂ ದಿಕ್ಕಿಗೆ ರಾಜಕಾರಣಿಗಳ ಆಕೃತಿ, ಸೈನಿಕರ ಆಕೃತಿ, ರೈತರ ಆಕೃತಿ ಸೇರಿದಂತೆ ಮಳೆಯ ಹೆಸರಿನಲ್ಲಿ ಧಾನ್ಯ ಹಾಗೂ ಅನ್ನದ ಉಂಡೆಗಳನ್ನು ಇಟ್ಟು ಬರುತ್ತಾರೆ. ಮಾರನೇ ದಿನ ಬೆಳಿಗ್ಗೆ ಬಂದು ಫಲವನ್ನು ನೋಡುತ್ತಾರೆ. ಯಾವ್ಯಾವ ಮೂರ್ತಿಗಳಿಗೆ ಪೆಟ್ಟಾಗಿದೆ? ಅನ್ನದ ಉಂಡೆ ಹೇಗಿದೆ? ಮಳೆ, ಬೆಳೆ ಹೇಗಿದೆ ಎಂಬುದನ್ನು ನೋಡಿ ಅದರ ಮೇಲೆ ಭವಿಷ್ಯ ನಿರ್ಧಾರ ಮಾಡುತ್ತಾರೆ. ಈ ಹಿಂದೆ ಇಂದಿರಾ ಗಾಂಧಿ ಹತ್ಯೆಯಾದಾಗ ರಾಷ್ಟ್ರಮಟ್ಟದ ನಾಯಕರ ಬೊಂಬೆಗೆ ಪೆಟ್ಟಾಗಿತ್ತು. ಯಡಿಯೂರಪ್ಪ ಖುರ್ಚಿ ಬಿಟ್ಟು ಕೆಳಗಿಳಿಯುವಾಗ ಕರ್ನಾಟಕದ ದಿಕ್ಕಿನ ಬೊಂಬೆಗೆ ಪೆಟ್ಟಾಗಿತ್ತು. ಮಳೆ, ಬೆಳೆ ಸಹ ಈ ಬೊಂಬೆ ನುಡಿದ ಭವಿಷ್ಯದಂತೆಯೇ ಆಗಿತ್ತು.

ಈ ವರ್ಷ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಸ್ಥಿತಿ ಡೋಲಾಯಮಾನವಾಗಿದೆ. ಕರ್ನಾಟಕದ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದು, ಸಿಎಂ ಸಿದ್ದರಾಮಯ್ಯ ಖುರ್ಚಿ ಬಿಟ್ಟು ಕೆಳಗಿಳಿಯುವ ಪರಿಸ್ಥಿತಿ ಬರುತ್ತದೆ. ಅಲ್ಲದೇ ನಾಲ್ಕೂ ದಿಕ್ಕಿನ ಸೈನಿಕರ ಕೈ ಹಾಗೂ ತೋಪಿಗೆ ಪೆಟ್ಟಾಗಿದ್ದು, ಇದು ಯುದ್ಧದ ಮುನ್ಸೂಚನೆ. ಯುದ್ಧದಿಂದ ದೇಶದಲ್ಲಿ ಅನ್ನದ ಕೊರತೆಯಾಗುವ ಸಾಧ್ಯತೆ ಇದ್ದು, ಅದನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಪ್ರಧಾನಿ ಮೋದಿ ಅವರು ಸುಭದ್ರವಾಗಿರಲಿದ್ದಾರೆ ಎಂದು ಬೊಂಬೆ ಭವಿಷ್ಯ ನುಡಿದಿದೆ ಎನ್ನುತ್ತಾರೆ ಹನುಮನಕೊಪ್ಪದ ಮುಖಂಡರು.

ಈ ಬಾರಿ ಎರಡೂ ಮಳೆಗಳು ಕೈ ಕೊಡುವ ಸಾಧ್ಯತೆ ಇದೆ. ಉದ್ದು, ಶೇಂಗಾ ಹೊರತುಪಡಿಸಿದರೆ ಉಳಿದ ಧಾನ್ಯಗಳ ಬೇಡಿಕೆ ಯಥಾಸ್ಥಿತಿಯಲ್ಲಿದೆ. ಶೇಂಗಾ ಹಾಗೂ ಉದ್ದಿನ ಬೆಳೆಗೆ ಸೆಪ್ಟಂಬರ್ ಅಥವಾ ಅಕ್ಟೋಬರ್‌ನಲ್ಲಿ ಬೇಡಿಕೆ ಬರಲಿದೆ. ದನಗಳಿಗೆ ರೋಗದ ಬಾಧೆ ಕಾಡಿದರೆ, ಹೊಲದಲ್ಲಿ ಕೆಲಸ ಮಾಡುವ ರೈತರಿಗೆ ಆಗಾಗ ಸ್ವಲ್ಪ ಪೆಟ್ಟುಗಳಾಗುವ ಭೀತಿ ಇದೆ ಎನ್ನುತ್ತಾರೆ ಇನ್ನೋರ್ವ ಹಿರಿಯರು.

ಒಟ್ಟಾರೆ ಪ್ರತಿವರ್ಷ ಯುಗಾದಿ ಹಬ್ಬದಂದು ನಡೆಯುವ ಈ ಫಲ ಹಾಕುವ ಪದ್ಧತಿ ಇಂದಿಗೂ ಮುಂದುವರೆದಿದ್ದು, ಅನೇಕ ಭವಿಷ್ಯಗಳು ನಿಜ ಕೂಡ ಆಗಿವೆ. ಈ ವರ್ಷದ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗಲಿದೆಯೋ ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/03/2026 07:02 pm

Cinque Terre

90.94 K

Cinque Terre

8

ಸಂಬಂಧಿತ ಸುದ್ದಿ