ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಹಗಲು ಹೊತ್ತಿನಲ್ಲಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಲಕ್ಷ್ಮೇಶ್ವರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷ ತಂಡ ರಚನೆ ಮತ್ತು ಆರೋಪಿ ಬಂಧನ
ಮನೆ ಕಳ್ಳತನ ಮಾಡಿದ ಆರೋಪಿತರ ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಸಿಪಿಐ ಶಿರಹಟ್ಟಿ ನೇತೃತ್ವದಲ್ಲಿ ಪಿಎಸ್‌ಐ ನಾಗರಾಜ್ ಗಡದ ಮತ್ತು ಕ್ರೈಂ ಪಿಎಸ್‌ಐ ಟಿ.ಕೆ. ರಾಥೋಡ್ ಅವರನ್ನೊಳಗೊಂಡ ಈ ತಂಡವು ತೀವ್ರ ಕಾರ್ಯಾಚರಣೆ ನಡೆಸಿ, ಕಳ್ಳತನ ಮಾಡಿದ ಆರೋಪಿ ಚಮನ್‌ಸಾಬ್ ಪಾಟೀಲ್‌ನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಳವು ಮಾಡಿದ್ದ ಅಪಾರ ಮೌಲ್ಯದ ವಸ್ತುಗಳ ಜಪ್ತಿ
ಬಂಧಿತ ಕಳ್ಳ ಚಮನ್‌ಸಾಬ್ ಪಾಟೀಲ್‌ನಿಂದ ಪೊಲೀಸರು ಕಳವು ಮಾಡಿದ್ದ ಅಪಾರ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳು ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಆತನ ವಶದಿಂದ ಒಟ್ಟು 2.60 ಲಕ್ಷ ರೂಪಾಯಿ ಮೌಲ್ಯದ 21 ಗ್ರಾಂ ಚಿನ್ನಾಭರಣ, 25,000 ರೂಪಾಯಿ ಮೌಲ್ಯದ 100 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 14,000 ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಒಂದು ಜೊತೆ ಚಿನ್ನದ ಬುಗುಡಿ (2 ಗ್ರಾಂ, ಅಂದಾಜು ₹20,000), ಒಂದು ಜೊತೆ ಚಿನ್ನದ ಬೆಂಡ್ವಾಲಿ (3 ಗ್ರಾಂ, ಅಂದಾಜು ₹30,000), ಒಂದು ಜೊತೆ ಚಿನ್ನದ ಜುಮುಕಿ (3 ಗ್ರಾಂ, ಅಂದಾಜು ₹30,000), ಎರಡು ಚಿನ್ನದ ಮೂಗುತಿಗಳು (1 ಗ್ರಾಂ, ಅಂದಾಜು ₹10,000), ಒಂದು ಜೊತೆ ಬೆಳ್ಳಿ ಕಾಲ್ ಚೈನ್‌ಗಳು (100 ಗ್ರಾಂ, ಅಂದಾಜು ₹15,000), ಮತ್ತು 9,000 ಹಾಗೂ 5,000 ರೂಪಾಯಿ ನಗದು ಸೇರಿವೆ. ಅಲ್ಲದೆ, ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಟ್ಟಿಯಲ್ಲಿ ಕಳವು ಮಾಡಲಾಗಿದ್ದ 12 ಗ್ರಾಂ ತೂಕದ ಚಿನ್ನದ ನೆಕ್ಲೇಸ್ (ಅಂದಾಜು ₹45,000) ಸಹ ವಶಕ್ಕೆ ಪಡೆಯಲಾಗಿದೆ.
Kshetra Samachara
20/03/2026 03:04 pm