ಧಾರವಾಡ: ಹುಟ್ಟುತ್ತ ಅಣ್ಣ, ತಮ್ಮಂದಿರು ಬೆಳೆಯುತ್ತ ದಾಯಾದಿಗಳು ಎಂಬ ಮಾತು ಈಗ ಪ್ರಸ್ತುತವೆನಿಸಿದೆ. ಆಸ್ತಿ ಅದ್ಯಾವ ಹಂತಕ್ಕೆ ಮನುಷ್ಯನನ್ನು ಕೊಂಡೊಯ್ಯುತ್ತದೆ ಎಂದರೆ ಒಡಹುಟ್ಟಿದವಳೆಂದೂ ನೋಡದೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡುವ ಹಂತಕ್ಕೆ ಈ ಆಸ್ತಿ ತೆಗೆದುಕೊಂಡು ಹೋಗಿದೆ.
ಈ ಘಟನೆ ಬೇರೆಲ್ಲೂ ನಡೆದಿಲ್ಲ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.
ಈ ಫೋಟೋದಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ಶಿವಲೀಲಾ ಸಂಗೊಳ್ಳಿ. ಇನ್ನು ಈ ಫೋಟೋದಲ್ಲಿ ಕಾಣ್ತಾ ಇರುವ ಮಹಾನುಭಾವ ಬೇರೆ ಯಾರೂ ಅಲ್ಲ. ಇದೇ ಶಿವಲೀಲಾಳ ಜೊತೆ ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ ಹನುಮಂತ ಯಲಿವಾಳ. ಈತನೇ ಈ ಕ್ರೈ ಹಿಸ್ಟರಿಯ ಕಥಾ ನಾಯಕ.
ಒಬ್ಬರಿಗೊಬ್ಬರು ರಕ್ತ ಹಂಚಿಕೊಂಡು ಹುಟ್ಟಿದ ಶಿವಲೀಲಾ ಹಾಗೂ ಹನುಮಂತ ಮದುವೆಯಾಗುವವರೆಗೂ ಚೆನ್ನಾಗಿಯೇ ಇದ್ದರು. ಸುಖ ಸಂಸಾರ ಇವರದಾಗಿತ್ತು. ಅಣ್ಣ, ತಂಗಿ ಚೆನ್ನಾಗಿಯೇ ಇದ್ದರು.
ವಯಸ್ಸಿಗೆ ಬಂದ ನಂತರ ಶಿವಲೀಲಾಳನ್ನು ತಡಕೋಡ ಗ್ರಾಮದ ಸಂಗೊಳ್ಳಿಯವರ ಮನೆತನಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಅದ್ಯಾವ ಕಾರಣಕ್ಕೋ ಏನೋ ಶಿವಲೀಲಾ ತನ್ನ ಗಂಡನ ಮನೆ ಬಿಟ್ಟು ತವರೂರಾದ ಅಮ್ಮಿನಬಾವಿ ಗ್ರಾಮಕ್ಕೆ ಬಂದು ತವರು ಮನೆಯಲ್ಲೇ ವಾಸವಾಗಿದ್ದಳು. ಇವಳಿಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದಾರೆ.
ಶಿವಲೀಲಾ ಹಾಗೂ ಹನುಮಂತ ತಮ್ಮ ತಾಯಿ ಇರುವವರೆಗೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಯಾವಾಗ ತಾಯಿ ತೀರಿ ಹೋದಳೋ ಆಗಲೇ ಇವರಿಬ್ಬರ ಮಧ್ಯೆ ಆಸ್ತಿಗಾಗಿ ಕಲಹ ಆರಂಭವಾಗಿಬಿಟ್ಟಿತ್ತು. ತನ್ನ ತಾಯಿ ತೀರಿ ಹೋದ ನಂತರ ಶಿವಲೀಲಾ ಅಮ್ಮಿನಬಾವಿ ಗ್ರಾಮದಲ್ಲೇ ಬೇರೆ ಮನೆ ಮಾಡಿ ವಾಸವಾಗಿದ್ದಳು. ತವರು ಮನೆಗೆ ಸೇರಿದ ಸುಮಾರು ನಾಲ್ಕೂವರೆ ಎಕರೆ ಜಮೀನು ಇತ್ತು. ಅದರಲ್ಲಿ ಅರ್ಧ ಪಾಲು ತನಗೂ ಕೊಡಬೇಕು ಎಂದು ಶಿವಲೀಲಾ ಅಣ್ಣನ ಬಳಿ ಕೇಳಿಕೊಂಡಿದ್ದಳು.
ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಆಗಾಗ ಕಲಹ ಕೂಡ ನಡೆದಿದ್ದವು. ಗುರುವಾರ ಯುಗಾದಿಯಂದು ಶಿವಲೀಲಾ ಹೊಲಕ್ಕೆ ಪೂಜೆ ಮಾಡಲೆಂದು ಹೋಗಿದ್ದಳು. ಆಗ ಅಲ್ಲಿಗೆ ಹೋದ ಅಣ್ಣ ಅವಳೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಕೊನೆಗೆ ಅಣ್ಣ ತನ್ನ ಸ್ವಂತ ತಂಗಿ ಶಿವಲೀಲಾಳನ್ನು ಕುಡಗೋಲಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಶಿವಲೀಲಾ ತನ್ನ ತವರು ಮನೆಗೆ ಸೇರಿದ ಪಿತ್ರಾರ್ಜಿತ ಆಸ್ತಿಯಲ್ಲಿ ಅರ್ಧ ಪಾಲು ಕೇಳಿದ್ದಳು. ಆಕೆ ಕೇಳಿದಷ್ಟು ಆಸ್ತಿ ಕೊಡಲಾಗುವುದಿಲ್ಲ ಎಂದು ಆಗಾಗ ಜಗಳ ನಡೆಯುತ್ತಲೇ ಇತ್ತು. ಆದರೆ, ಈ ಜಗಳ ಇದೀಗ ಯುಗಾದಿ ಹಬ್ಬದಂದೇ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಆರೋಪಿ ಹನುಮಂತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಗುಂಜನ್ ಆರ್ಯ ತಿಳಿಸಿದ್ದಾರೆ.
ಒಟ್ಟಾರೆ ಗಂಡನನ್ನು ಬಿಟ್ಟು ಬಂದ ಶಿವಲೀಲಾ ತವರು ಮನೆಯ ಆಸ್ತಿ ಕೇಳಿದ್ದಾಳೆ. ಇದೀಗ ತವರು ಮನೆಯ ಆಸ್ತಿಯೂ ಸಿಗದೇ ಸ್ವಂತ ಅಣ್ಣನಿಂದಲೇ ಬರ್ಬರವಾಗಿ ಹತ್ಯೆಗೀಡಾಗಿ ಹೋಗಿದ್ದಾಳೆ. ಒಡಹುಟ್ಟಿದವಳೆಂಬ ಪ್ರೀತಿ, ಕಾಳಜಿಯೂ ಇಲ್ಲದ ಅಣ್ಣ ಆಸ್ತಿಗಾಗಿ ಸ್ವಂತ ತಂಗಿಯನ್ನೇ ಹತ್ಯೆ ಮಾಡಿದ್ದು ಇಡೀ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2026 03:41 pm