ಕಲಘಟಗಿ: ಕಲಘಟಗಿ ತಾಲ್ಲೂಕಿನ ತಂಬೂರು ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಬಳಿ ನಿನ್ನೆ ಸಾಯಂಕಾಲ 7 ಗಂಟೆಗೆ ಖಾಸಗಿ ಗ್ಯಾಸ್ ಟ್ಯಾಂಕರ್ ವೊಂದು ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ವಾಹನ ಚಾಲಕ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾನೆ.
ವಾಹನ ಚಾಲಕ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದ ವರೆಗೆ ಅಗ್ನಿಶಾಮಕದಳ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿದ್ದೆ ಸಹ ಮಾಡದೆ ಗ್ಯಾಸ್ ಸೋರಿಕೆಯನ್ನು ತಡೆಯಲು ಹರಸಾಹಸ ಪಟ್ಟಿದ್ದಾರೆ.
ಸೋರಿಕೆಯಾದ ಟ್ಯಾಂಕರ್ ನಲ್ಲಿರುವ ಗ್ಯಾಸ್ ಬೇರೆ ಎರಡು ವಾಹನಗಳಿಗೆ ತುಂಬಿಸಿ ಉಳಿದ ಗ್ಯಾಸನ್ನು ನೀರಿನ ಮೂಲಕ ಹೊರಗಡೆ ತೆಗೆಯುವ ಕಾರ್ಯ ಕೈಗೊಂಡಿದ್ದಾರೆ.
ಅಷ್ಟೇ ಅಲ್ಲದೆ, ಘಟನಾ ಸ್ಥಳದಿಂದ ಸುಮರು ಹತ್ತು ಕಿಲೋಮೀಟರ್ ನಷ್ಟು ಯಾವುದೇ ವಾಹನ ಓಡಾಡದಂತೆ ಕಲಘಟಗಿಯಿಂದ ಯಲ್ಲಾಪುರ ವರೆಗೂ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ಸ್ಥಳದಲ್ಲಿ ಕಲಘಟಗಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನ ತಡೆಯುವಲ್ಲಿ ಕಾರ್ಯ ಪ್ರವೃತ್ತರಾಗಿದ್ದರು. ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಗುಂಜನ್ ಆರ್ಯ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ, ಧಾರವಾಡ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಟ್ಟಾರೆ ಗ್ಯಾಸ್ ಟ್ಯಾಂಕರ್ ಸೋರಿಕೆಯಿಂದ ಆಗಲಿದ್ದ ಭಾರಿ ಅನಾಹುತವನ್ನು ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಿಂದ ತಪ್ಪಿದಂತಾಗಿದ್ದು, ಈ ಸಾಹಸ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ವರದಿ: ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/03/2026 07:55 pm
LOADING...