ಮಂಗಳೂರು: ವಿಧಾನಸೌಧದ ಮುಖ್ಯ ದ್ವಾರ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ 25ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಬೆಂಗಳೂರಿನ ವಿಧಾನಸೌಧ ಮುಖ್ಯ ದ್ವಾರದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಈ ದ್ವಾರವನ್ನು ಮುಖ್ಯಮಂತ್ರಿ ಅವರು ಮಾರ್ಚ್ 25ರಂದು ಬೆಳಿಗ್ಗೆ ಉದ್ಘಾಟಿಸಲಿದ್ದಾರೆ. ಈ ದ್ವಾರವನ್ನು ಹಿಂದಿನ ರಸ್ತೆ ಭಾಗದಿಂದ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಯೋಜನೆ ಕರ್ನಾಟಕದ ಕಲೆ ಮತ್ತು ವಾಸ್ತುಶೈಲಿಗೆ ತಕ್ಕಂತೆ ರೂಪಿಸಲ್ಪಟ್ಟಿದ್ದು, ಸಂಬಂಧಿತ ವಿಭಾಗಗಳ ಸಹಯೋಗದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಈಗಾಗಲೇ ಈ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಅದೇ ರೀತಿ ಗ್ರ್ಯಾಂಡ್ ಸ್ಟೆಪ್‌ಇನ್ ಹಾಗೂ ಹೈಕೋರ್ಟ್ ಸೈಡ್ ದ್ವಾರಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಆ ಕೆಲಸಗಳು ಕೈಗೆತ್ತಿಕೊಳ್ಳಲಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಇದರೊಂದಿಗೆ ವಿಧಾನಸೌಧದ ಲೈಟಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದ್ದು, ಇದು ಸಂಪೂರ್ಣ ಕಟ್ಟಡಕ್ಕೆ ಅಲ್ಲದಿದ್ದರೂ ಪ್ರಮುಖ ಭಾಗಗಳಿಗೆ ಅಗತ್ಯವಿರುವ ವಿದ್ಯುತ್ ಒದಗಿಸುವ ವ್ಯವಸ್ಥೆಯಾಗಲಿದೆ. ಈ ಸೋಲಾರ್ ವ್ಯವಸ್ಥೆಯನ್ನೂ ಮಾರ್ಚ್ 25ರಂದು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ಖಾದರ್ ಮಾಹಿತಿ ನೀಡಿದರು.
ಇದಲ್ಲದೆ ವಿಧಾನಸೌಧ ಪ್ರದೇಶದಲ್ಲಿ ನಾಯಿಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಡಾಗ್ ಶೆಲ್ಟರ್ ನಿರ್ಮಾಣ ಕುರಿತು ತಮ್ಮ ಅಭಿಪ್ರಾಯ ಹಾಗೂ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಈ ಕುರಿತು ಅಂತಿಮ ತೀರ್ಮಾನವನ್ನು ಸರ್ಕಾರವೇ ಕೈಗೊಳ್ಳಲಿದೆ ಎಂದು ಹೇಳಿದರು.
PublicNext
21/03/2026 08:01 pm