ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ, ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಕಳ್ಳಬಟ್ಟಿ ಮುಕ್ತ ಜಿಲ್ಲೆಯಾಗಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.
ಕಳ್ಳಬಟ್ಟಿ ತಯಾರಿಕೆ ಮತ್ತು ಅಕ್ರಮ ಮದ್ಯದ ವಹಿವಾಟಿನ ವಿರುದ್ಧ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಅಕ್ರಮ ಮದ್ಯ ಮಾರಾಟ ಅಥವಾ ಸಾಗಾಟ ಮಾಡುವುದು ಕಂಡು ಬಂದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ನೆರೆ ಜಿಲ್ಲೆ ಅಥವಾ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಣೆಯಾಗುವ ಸಂಭವವಿರುವುದರಿಂದ, ಜಿಲ್ಲೆಯ ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ತೀವ್ರಗೊಳಿಸಬೇಕು ಕಟ್ಟು ನಿಟ್ಟಿನ ಸೂಚನೆ ನೀಡಿದರು. ಕಳ್ಳ ಬಟ್ಟಿ ತಯಾರಿಕೆ, ಮಾರಾಟ ಮಾಡುವುದು ಕಂಡುಬಂದಿದ್ದನ್ನು ಇಲಾಖೆಗೆ ತಿಳಿಸಿ, ಅವರ ಹೆಸರನ್ನ ಗೌಪ್ಯವಾಗಿಡುತ್ತೇವೆ ಎಂದರು.
ಅಬಕಾರಿ ಉಪ ಆಯುಕ್ತ ಡಾ. ಮಾದೇಶ್ ಮಾತನಾಡಿ, ಜಿಲ್ಲೆಯಲ್ಲಿ ಪರವಾನಗಿ ಪಡೆದ 160 ಮದ್ಯದಂಗಡಿಗಳು ಇದ್ದು, ಇವುಗಳ ಮೇಲೆ ಸದಾ ನಿಗಾವಹಿಸಲಾಗಿದೆ. ಅಲ್ಲದೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಕಳ್ಳಬಟ್ಟಿ ಸಾರಾಯಿ ನಿರ್ಮೂಲನೆ, ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆ ಕುರಿತು ಗ್ರಾಮ ಸಭೆ, ಜಾಗೃತಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ 2010 ರಿಂದ ಈ ವರೆಗೆ ಯಾವುದೇ ರೀತಿಯ ಪ್ರಕರಣಗಳು ದಾಖಲಾಗಿಲ್ಲ. ಆದರೆ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಯಾವುದೇ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದನ್ನು ತಡೆದು 2023 ರಿಂದ 2026ರ ಫೆಬ್ರವರಿ ಅಂತ್ಯಕ್ಕೆ 7 ಪ್ರಕರಣ ದಾಖಲಿಸಿ, 293.45ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ದಾಳಿ ನಡೆಸಲಾಗಿದ್ದು, 2024 ಜುಲೈ ನಿಂದ 2025ರ ಜೂನ್ ವರೆಗೆ 892 ಕಡೆ ಹಾಗೂ 2025ರ ಜುಲೈ ನಿಂದ ಫೆಬ್ರವರಿ 16ರವರೆಗೆ 872 ಸೇರಿ ಒಟ್ಟು 1764 ಕಡೆ ದಾಳಿ ನಡೆಸಿ 755 ಲೀಟರ್ ಮದ್ಯ ಮತ್ತು 152ಲೀ ಬಿಯರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
Kshetra Samachara
29/03/2026 11:04 pm