ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ ಜಿಲ್ಲೆಯ ಈ ಊರಲ್ಲಿ ಮಾತ್ರ ಗ್ಯಾಸ್ ಸಮಸ್ಯೆಯೇ ಇಲ್ಲ

ಬೆಳಗಾವಿ: ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಎಲ್ಲೆಲ್ಲೂ ಇಂಧನ, ಗ್ಯಾಸ್ ಸಿಲಿಂಡರ್ ಸಮಸ್ಯೆ ತಲೆದೋರಿದೆ. ಆದರೆ, ಬೆಳಗಾವಿ ಜಿಲ್ಲೆಯ ಈ ಊರಲ್ಲಿ ಮಾತ್ರ ಗ್ಯಾಸ್ ಸಮಸ್ಯೆ ಇಲ್ಲ. ಇಲ್ಲಿನ ಶೇ.85ರಷ್ಟು ಮನೆಗಳಲ್ಲಿ ಗೋಬರ್ ಗ್ಯಾಸ್ ಇದೆ. ನಮಗೆ ಬೇಕಾದ ಅಡುಗೆ ಅನಿಲ ನಾವೇ ಉತ್ಪಾದಿಸಿ, ಸ್ವಾವಲಂಬಿ ಆಗಿದ್ದೇವೆ.

ಹೌದು, ಬೆಳಗಾವಿ ತಾಲ್ಲೂಕಿನ ಕಟ್ಟಣಭಾವಿ ಎನ್ನುವ ಪುಟ್ಟ ಗ್ರಾಮ ಗೋಬರ್ ಗ್ಯಾಸ್ ಬಳಕೆಯಲ್ಲಿ ಇಡೀ ದೇಶಕ್ಕೆ ಮಾದರಿ ಆಗಿದೆ. ಈ ಊರಲ್ಲಿ ಸುಮಾರು 250 ಮನೆಗಳಿವೆ. ಈ ಪೈಕಿ 200ಕ್ಕೂ ಅಧಿಕ ಮನೆಗಳಲ್ಲಿ ಗೋಬರ್ ಗ್ಯಾಸ್ ಇರುವುದು ವಿಶೇಷ.

ಕೃಷಿ, ಹೈನುಗಾರಿಕೆಯನ್ನೆ ಕಟ್ಟಣಭಾವಿ ಗ್ರಾಮಸ್ಥರು ಅವಲಂಬಿಸಿದ್ದಾರೆ. ಬಹುತೇಕ ಎಲ್ಲರ ಮನೆಗಳಲ್ಲಿ ಆಕಳು, ಎಮ್ಮೆ ಮತ್ತು ಎತ್ತುಗಳು ಇವೆ. ಅವುಗಳ ಸೆಗಣಿ ಮತ್ತು ಶೌಚಾಲಯ(ಟಾಯ್ಲೆಟ್) ತ್ಯಾಜ್ಯ ಬಳಸಿ ಗೋಬರ್ ಗ್ಯಾಸ್ ಉತ್ಪಾದಿಸುತ್ತಾರೆ. ಇಲ್ಲಿನ ಮನೆಗಳ ಹಿತ್ತಲಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕಡೆ ಗೋಬರ್ ಗ್ಯಾಸ್ ಘಟಕಗಳು ಕಾಣಸಿಗುತ್ತವೆ. ಅದರಿಂದ ಉತ್ಪಾದನೆ ಆಗುವ ಗ್ಯಾಸ್ ತಮ್ಮ ದಿನನಿತ್ಯದ ಅಡುಗೆಗೆ ಬಳಸುವ ಮೂಲಕ ಇತರೆ ಗ್ರಾಮಗಳಿಗೂ ಮಾದರಿ ಆಗಿದ್ದಾರೆ.

ಗೋಬರ್ ಗ್ಯಾಸ್ ಇರೋದರಿಂದ ಕಟ್ಟಣಭಾವಿ ಊರಿನ ಜನರಿಗೆ ಗ್ಯಾಸ್ ಖಾಲಿ ಆಯಿತು, ಸಿಲಿಂಡರ್ ಬುಕ್ ಮಾಡಬೇಕು ಎನ್ನುವ ಚಿಂತೆ ಇಲ್ಲ. ಗೋಬರ್ ಗ್ಯಾಸ್ ಒಲೆಯಲ್ಲಿ ಅಡುಗೆ ತಯಾರಿಸಿ, ಮನೆಯವರೆಲ್ಲಾ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಊರವರು ಇದೇ ನೈಸರ್ಗಿಕ ಗ್ಯಾಸ್ ಬಳಸುತ್ತಿರುವುದು ಗಮನಿಸಬೇಕಾದ ಸಂಗತಿ.

ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ 76 ವರ್ಷದ ಪರಿಸರವಾದಿ, ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣಿಕರ್ ಅವರ ಕ್ರಾಂತಿಕಾರಕ ಹೆಜ್ಜೆಯಿಂದ 1990-95ರ ಸುಮಾರಿಗೆ ಜನಜಾಗರಣ ಸಂಸ್ಥೆ, ಖಾದಿ ಗ್ರಾಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಬೆಳಗಾವಿ, ಹುಕ್ಕೇರಿ, ಖಾನಾಪುರ ತಾಲ್ಲೂಕಿನಲ್ಲಿ ಸುಮಾರು 30 ಸಾವಿರ ಮನೆಗಳಲ್ಲಿ ಗೋಬರ್ ಗ್ಯಾಸ್ ಘಟಕಗಳು ತಲೆ ಎತ್ತಿವೆ. ಮೊದಲೆಲ್ಲಾ ಅಡುಗೆಗೆ ಕಟ್ಟಿಗೆಗಳನ್ನು ಬಳಕೆ ಮಾಡುತ್ತಿದ್ದರಿಂದ ಕಾಡು ನಾಶವಾಗುತ್ತಿತ್ತು. ಅಲ್ಲದೇ ಕಟ್ಟಿಗೆ ಹೊಗೆಯಿಂದ ಮಹಿಳೆಯರು ವಿವಿಧ ಕಾಯಿಲೆಗಳಿಂದ ಬಳಲುವಂತಾಗುತ್ತಿತ್ತು. ಇದನ್ನರಿತ ಶಿವಾಜಿ ಅವರು, ಹೊಗೆ ರಹಿತ ಒಲೆಗೆ ಗೋಬರ್ ಗ್ಯಾಸ್ ಉತ್ತಮ ಪರಿಹಾರವೆಂದು ಈ ಭಾಗದಲ್ಲಿ ಜಾಗೃತಿ ಮೂಡಿಸಿದರು. ಎನ್‌ಜಿಒ ಜತೆ ಒಡಂಬಡಿಕೆ ಮಾಡಿಕೊಂಡು 'ದೀನಬಂಧು' ಎಂಬ ಸರಳ ಗೋಬರ್ ಘಟಕಗಳನ್ನು ನಿರ್ಮಿಸಿದರು. ಅದರಲ್ಲಿ ಕಟ್ಟಣಭಾವಿ ಊರಲ್ಲಿ 200ಕ್ಕೂ ಅಧಿಕ ಘಟಕಗಳಿವೆ. ಇದಕ್ಕಾಗಿ ಶಿವಾಜಿ ದಾದಾ ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಕೆಲವೊಂದಿಷ್ಟು ಜನರು ಅವರ ಮೈಮೇಲೆ ಸೆಗಣಿ ನೀರು ಚೆಲ್ಲಿದ್ದರು. ಆದರೂ ಪಟ್ಟು ಬಿಡದ ಶಿವಾಜಿ ದಾದಾ ನಮಗೆಲ್ಲಾ ಗೋಬರ್ ಗ್ಯಾಸ್ ಕೊಡಿಸಿದ್ದರು.

Edited By : Somashekar
PublicNext

PublicNext

30/03/2026 12:55 pm

Cinque Terre

10.2 K

Cinque Terre

0

ಸಂಬಂಧಿತ ಸುದ್ದಿ