ಹೊಸಪೇಟೆ : ಅಂತರ್ ಜಿಲ್ಲಾ ಮೋಟಾರ್ ಸೈಕಲ್ ಕಳ್ಳತನ ಮಾಡ್ತಿದ್ದ ಆರೋಪಿಯನ್ನು ಹೊಸಪೇಟೆ ಪಟ್ಟಣ ಪೊಲೀಸರು ಬಂಧಿಸಿ, ₹12 ಲಕ್ಷ 81 ಸಾವಿರ ಮೌಲ್ಯದ 14 ವಿವಿಧ ಕಂಪನಿಗಳ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಫೆ.15ರಂದು ವೆಂಕಟೇಶ್ ಎಂಬವರ ಹೀರೋ ಸ್ಪ್ಲೆಂಡರ್ ಪ್ರೊ ಬೈಕ್ (KA-35-EB-4166) ಕಳ್ಳತನವಾಗಿತ್ತು. ಫೆ. 21ರಂದು ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಪತ್ತೆಗಾಗಿ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ನಿರ್ದೇಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅಡಿಷನಲ್ ಎಸ್‌ಪಿ ಮಂಜುನಾಥ ಹಾಗೂ ಡಿಎಸ್ಪಿ ಡಾ. ಮಂಜುನಾಥ ತಳವಾರ ಮಾರ್ಗದರ್ಶನದಲ್ಲಿ ಪಿಐ ಫೈಜುಲ್ಲಾ ಹಾಗೂ ಪಿಐ ಡಿ. ಹುಲುಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಮಾರ್ಚ್ 30ರ ಬೆಳಗಿನ ಜಾವ ಕನಕದಾಸ ವೃತ್ತದಲ್ಲಿ ಗಸ್ತು ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಮೋಟಾರ್ ಸೈಕಲ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನನ್ನು ಮೆಹಬೂಬ್ (37), ಮುನಿರಾಬಾದ್ ನಿವಾಸಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಹೊಸಪೇಟೆ, ಮುನಿರಾಬಾದ್, ಬಳ್ಳಾರಿ, ಗದಗ, ಸಂಡೂರು, ಗಂಗಾವತಿ, ಕಂಪ್ಲಿ ಹಾಗೂ ಮಂಡ್ಯ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಯಿಂದ 14 ಬೈಕ್ ಗಳನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ಮುಂದುವರೆಸಲಾಗಿದೆ. ಆರೋಪಿ ವಿರುದ್ಧ ಹಿಂದೆಯೂ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪರಮೇಶ್ವರಪ್ಪ, ರಾಜಶೇಖರ್ ಹಾಗೂ ಸಿಬ್ಬಂದಿ ರಾಘವೇಂದ್ರ, ಲಿಂಗರಾಜ್, ಚಂದ್ರಶೇಖರ್, ಕೊಟ್ರೇಶ್, ಪಕ್ಕೀರಪ್ಪ, ದೇವೇಂದ್ರ ಮತ್ತು ಶಿವಪ್ಪಜಿ ಭಾಗವಹಿಸಿದ್ದರು.
ಈ ಸಾಧನೆಗಾಗಿ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಪ್ರಶಂಸಿಸಿದ್ದಾರೆ.
PublicNext
30/03/2026 09:36 pm