ನಾಪೋಕ್ಲು: ಕೊಡಗು ಜಿಲ್ಲೆಯ ಎಮ್ಮೆಮಾಡು ವ್ಯಾಪ್ತಿಯಲ್ಲಿ ನಡೆದ ಮುಸ್ಲಿಂ ಸಮುದಾಯದ ಮದುವೆ ಸಮಾರಂಭವೊಂದರಲ್ಲಿ, ತುಳುನಾಡಿನ ಪವಿತ್ರ ದೈವವನ್ನೇ ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿರುವ ಘಟನೆ ಇದೀಗ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮದುಮಗ ಮತ್ತು ಆತನ ಬೆಂಬಲಿಗರ ಈ 'ಹುಚ್ಚಾಟ'ದ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿವೆ.
ಮುಸ್ಲಿಂ ಸಮುದಾಯದಲ್ಲಿ ಮದುವೆ ದಿನದ ರಾತ್ರಿ ಮದುಮಗ ತನ್ನ ಸ್ನೇಹಿತರೊಂದಿಗೆ ಸೇರಿ ತಮಾಷೆಗಾಗಿ ಒಂದಷ್ಟು ವಿನೋದದ ಕಾರ್ಯಕ್ರಮಗಳನ್ನು ಮಾಡುವುದು ರೂಢಿ. ಆದರೆ ಎಮ್ಮೆಮಾಡಿನಲ್ಲಿ ನಡೆದ ಈ ವಿವಾಹದಲ್ಲಿ ಮದುಮಗನಿಗೆ ತುಳುನಾಡಿನ ದೈವದ ಕೋಲದ ಮಾದರಿಯಲ್ಲಿ ಮುಖ ಹಾಗೂ ಮೈಗೆ ಬಣ್ಣ ಬಳಿದು, ದೈವವನ್ನೇ ಅಣಕಿಸುವ ರೀತಿಯಲ್ಲಿ ಕುಳ್ಳಿರಿಸಿ ವಿಕೃತವಾಗಿ ವರ್ತಿಸಲಾಗಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಕೇವಲ ಹಿಂದೂ ಸಂಘಟನೆಗಳು ಮಾತ್ರವಲ್ಲದೆ, ಸ್ವತಃ ಮುಸ್ಲಿಂ ಸಮುದಾಯದ ಅನೇಕರು ಈ ನಡೆಯನ್ನು ಖಂಡಿಸಿದ್ದಾರೆ. “ಇಂತಹ ವರ್ತನೆಗಳು ಸಮಾಜದ ಶಾಂತಿ ಕದಡುತ್ತವೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ” ಎಂದು ಸಮುದಾಯದ ಹಿರಿಯರು ಆಡಿಯೋಗಳ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ.
ತುಳುನಾಡಿನ ದೈವಾರಾಧನೆಯನ್ನು ಅಣಕಿಸಿದ ಮದುಮಗ ಮತ್ತು ತಂಡದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ಸಾರ್ವಜನಿಕ ಆಕ್ರೋಶಿತರಾಗಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
PublicNext
31/03/2026 10:04 am
LOADING...