ನಾಪೋಕ್ಲು: ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಮಹಿಳೆ ನಾಪತ್ತೆ - ಅರಣ್ಯ ಇಲಾಖೆ ಪೊಲೀಸರಿಂದ ತೀವ್ರ ಶೋಧ ಕಕ್ಕಬ್ಬೆ ಬಳಿಯ ಯುವಕಪಾಡಿ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳದ ಮಹಿಳೆ ಒಬ್ಬರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.
ಯುವಕಪಾಡಿ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿದ್ದ ಕೇರಳದ ಶರಣ್ಯ (36) ಎಂಬುವವರು ನಾಪತ್ತೆಯಾಗಿರುವ ಮಹಿಳೆ ಎಂದು ತಿಳಿದುಬಂದಿದೆ. ಆನ್‌ಲೈನ್ ಮೂಲಕ ಹೋಂಸ್ಟೇ ಬುಕ್ಕಿಂಗ್ ಮಾಡಿ ಬಂದ ಈ ಮಹಿಳೆ ಒಬ್ಬಳೇ ಇರುವುದರಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಇರುವ ಕಾರಣದಿಂದ ಇತರೆ ಪ್ರವಾಸಿಗರೊಂದಿಗೆ ಗುರುವಾರದಂದು ಜೊತೆಯಲ್ಲಿ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ಹಿಂತಿರುಗಿ ಬಾರದ ಕಾರಣ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆಯವರು ಹಾಗೂ ನಾಪೋಕ್ಲು ಪೊಲೀಸರು, ಗ್ರಾಮಸ್ಥರ ಸಹಕಾರದಿಂದ ಬೆಟ್ಟದಲ್ಲೆಲ್ಲ ಗುರುವಾರ ಮಧ್ಯರಾತ್ರಿವರೆಗೂ ಹುಡುಕಾಡಿದರೂ ಮಹಿಳೆಯ ಸುಳಿವು ದೊರೆತಿಲ್ಲ. ಬಳಿಕ ಶುಕ್ರವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿಸಿದರು. ಮಹಿಳೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.ಡ್ರೋನ್ ಕ್ಯಾಮರಾ ಬಳಸಿ ಮಹಿಳೆಯ ಪತ್ತೆ ಕಾರ್ಯವನ್ನು ಅರಣ್ಯ ಇಲಾಖೆ ಹಾಗೂ ಪೊಲೀಸರು ತೀವ್ರಗೊಳಿಸಿದ್ದಾರೆ.
ಮಹಿಳೆಯ ಮೊಬೈಲ್ ಮಲಯಾಳಂ ನೆಟ್‌ವರ್ಕ್‌ನಲ್ಲಿರುವುದಾಗಿ ತಿಳಿದು ಬಂದಿದ್ದು ದಟ್ಟ ಮಳೆಮೋಡ, ಕಡಿದಾದ ಹಾದಿ ಮತ್ತು ಕಾಡಾನೆಗಳ ಹಾವಳಿಯ ಮಧ್ಯೆ ಗ್ರಾಮಸ್ಥರ ಸಹಕಾರದೊಂದಿಗೆ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ, ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮಹಿಳೆಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
PublicNext
03/04/2026 10:22 pm
LOADING...