ಧಾರವಾಡ: ಸಾಮಾನ್ಯವಾಗಿ ಏಪ್ರಿಲ್ ತಿಂಗಳಿಂದ ಅಡ್ಡ ಮಳೆ ಆರಂಭವಾಗುತ್ತದೆ. ಆದರೆ, ಈ ಬಾರಿ ಮಾರ್ಚ್ ತಿಂಗಳಲ್ಲೇ ಮಳೆ ಆರಂಭವಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಭಾಗದಲ್ಲಂತೂ ಮಳೆಯ ಜೊತೆ ಆಲಿಕಲ್ಲು ಮಳೆಯಾಗಿದೆ. ಇದರಿಂದ ಹಲವು ಬೆಳೆ ಹಾಳಾಗಿದ್ದು, ಮಾವು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿದೆ.
ಹೌದು! ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮಾವಿನ ಇಳುವರಿ ಬರಲಿದೆ ಎಂದು ಮಾವು ಬೆಳೆಗಾರರು ನಿರೀಕ್ಷೆ ಮಾಡಿದ್ದರು. ಆದರೆ ಈ ಆಲಿಕಲ್ಲು ಮಳೆಯಿಂದ ಇಡೀ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಕಲಘಟಗಿ ಭಾಗದಲ್ಲಿ ಆಲಿಕಲ್ಲು ಮಳೆಗೆ ಏಳು ಗ್ರಾಮಗಳ 121 ಹೆಕ್ಟೇರ್‌ನಷ್ಟು ಮಾವು ಬೆಳೆ ಹಾಳಾಗಿದೆ. ಅದೇ ರೀತಿ ಇದಲ್ಲದೇ ಕುಂದಗೋಳ ತಾಲ್ಲೂಕಿನ ಒಂದು ಗ್ರಾಮದ ಇದೇ ಆಲಿಕಲ್ಲು ಮಳೆಗೆ 7.79 ಹೆಕ್ಟೇರ್ ಬೆಳೆ ಹಾಳಾಗಿದೆ. 30 ವರ್ಷದ ನಂತರ ಈ ರೀತಿ ಆಲಿಕಲ್ಲು ಮಳೆಯಾಗಿದ್ದು, ಇದರಿಂದ ಮಾವು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಈ ಆಲಿಕಲ್ಲು ಮಳೆಯಿಂದ ಈ ಭಾಗದ ಮಾವಿನ ಮರದಲ್ಲಿ ಒಂದೇ ಒಂದು ಮಾವು ಸಹ ಉಳಿದಿಲ್ಲ. ಅಲ್ಲದೇ ಮಾವಿನ ಮರದಲ್ಲಿ ಎಲೆ ಕೂಡ ಉಳಿಯದಂತೆ ಆಲಿಕಲ್ಲು ಬಿದ್ದಿವೆ. ಹೀಗಾಗಿ ಮಾವು ಬೆಳೆಗಾರರು ಭಾರೀ ನಷ್ಟ ಅನುಭವಿಸುವಂತಾಗಿದೆ.
ಇನ್ನು ಈ ಹಾನಿಯ ಸಂಪೂರ್ಣ ವರದಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಒಂದು ಹೆಕ್ಟೇರಿಗೆ 80 ಸಾವಿರ ಪರಿಹಾರಕ್ಕೆ ಬೇಡಿಕೆ ಕೂಡ ಇಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಹೆಚ್ಚು ಆಲಿಕಲ್ಲು ಮಳೆಯಿಂದ ಮಾವು ಬೆಳೆ ನಾಶವಾಗಿದ್ದು, ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಪರಿಹಾರ ಕೊಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಒಟ್ಟಾರೆ ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಮಾವು ಹೆಚ್ಚು ಇಳುವರಿ ಬರುತ್ತದೆ ಎಂದುಕೊಂಡಾಗಲೇ ಆಲಿಕಲ್ಲು ಮಾವಿಗೆ ಪೆಟ್ಟು ಕೊಟ್ಟಿದೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದ್ದಂತೂ ಸತ್ಯ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/04/2026 07:25 pm