ಶಿರಹಟ್ಟಿ: ಬಸವ ಜಯಂತಿ ದಿನದಂದು ವಿಶ್ವಗುರು ಬಸವಣ್ಣನವರನ್ನು ಕೇವಲ ಪೂಜಿಸಿ, ಅದ್ಧೂರಿ ಮೆರವಣಿಗೆ ನಡೆಸಿ ಹಾಡಿ ಹೊಗಳಿದರೆ ಸಾಲದು. ಅವರ ಬದುಕಿನ ಆದರ್ಶಗಳು ನಮ್ಮ ಜೀವನದ ಭಾಗವಾಗಬೇಕು. ಆಗ ಜಯಂತಿ ಆಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಬಸವಣ್ಣನವರ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ರೇಣುಕಾ ನಾಗರಾಜ ಲಕ್ಕುಂಡಿ ಅವರು ಹೇಳಿದರು.
12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವದ ಮಹಾನ್ ಚೇತನ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಕ್ಷಮ್ಯ ಅಪರಾಧವಾಗಿದೆ. ಎಲ್ಲರೂ ನನ್ನವರೆನ್ನುವ ವಿಶ್ವಭ್ರಾತೃತ್ವ ಹಾಗೂ ಎನಗಿಂತ ಕಿರಿಯರಿಲ್ಲ ಎಂಬ ವಿನಮ್ರ ಪ್ರಭಾವದಿಂದ ಜಗತ್ತನ್ನೇ ಬೆಳಗಿದ ಜಗಜ್ಯೋತಿ. ಇಡೀ ವಿಶ್ವಕ್ಕೆ ಕಾಯಕ ತತ್ವವನ್ನು ಸಾರಿದ ಶ್ರೇಷ್ಠ ಮಾನವತಾವಾದಿ ಬಸವಣ್ಣನವರ ಬದುಕಿನ ಅಧ್ಯಯನ ಅಗತ್ಯವಾಗಿದೆ ಎಂದರು.
ನಂತರ ಎಫ್.ಎಂ. ಡಬಾಲಿ ಕಾಲೇಜಿನ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಛತ್ರಪತಿ ಶಿವಾಜಿ ಅವರ ಕುರಿತು ಮಾತನಾಡುತ್ತಾ, ಛತ್ರಪತಿ ಶಿವಾಜಿ ಮಹಾರಾಜರು ದೇಶಭಕ್ತ, ಅವರಲ್ಲಿದ್ದ ಶೌರ್ಯ, ಧೈರ್ಯ, ಸ್ಥೈರ್ಯ ಇಂದಿನ ಮಕ್ಕಳಲ್ಲಿ, ಯುವಕರಲ್ಲಿ ಮೂಡಿಸಬೇಕು. ಶಿವಾಜಿ ಮಹಾರಾಜರು ಸರ್ವ ಧರ್ಮೀಯರಲ್ಲಿ ಒಳಿತು ಬಯಸಿದ ಮಹಾನ್ ಪುರುಷ ಎಂದರು.
ಸೋಮವಾರ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಇಬ್ಬರು ಮಹನೀಯರ ಕುರಿತು ಉಪನ್ಯಾಸ ನೀಡಿದರು. ಬೆಳಿಗ್ಗೆ ಮರಾಠಾ ಗಲ್ಲಿಯ ಅಂಬಾಭವಾನಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಸವರಾಜ ತುಳಿ, ಜಿಪಂ ಮಾಜಿ ಅಧ್ಯಕ್ಷ ವಿ.ವಿ. ಕಪ್ಪತ್ತನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಎಚ್.ಎಂ. ದೇವಗಿರಿ, ಎನ್.ಆರ್. ಕುಲಕರ್ಣಿ, ನಾಗರಾಜ ಲಕ್ಕುಂಡಿ, ಕೆ.ಎ. ಬಳಿಗೇರ, ಪರಮೇಶ ಪರಬ, ಅಜ್ಜುಗೌಡ್ರ ಪಾಟೀಲ, ಹೊನ್ನಪ್ಪ ಶಿರಹಟ್ಟಿ, ನಂದಪ್ಪ ಕಪ್ಪತ್ತನವರ, ಎಂ.ಕೆ. ಲಮಾಣಿ, ಎಸ್.ಬಿ. ಹೊಸೂರ, ಬಸವರಾಜ ಹಲಸೂರ, ಸಂದೀಪ ಕಪ್ಪತ್ತನವರ, ರವಿಗುಡಿಮನಿ, ಬಸವರಾಜ ಭೋರಶೆಟ್ಟರ, ಸುರೇಶ ಹವಳದ, ಗುಳಪ್ಪ ಕರಿಗಾರ,ವಿಠಲ ಬಿದವೆ ಅಕ್ಟರಸಾಬ ಯಾದಗಿರಿ, ಸಂತೋಷ ತೋಡೆಕಾರ, ರಾಮಣ್ಣ ಕಂಬಳಿ, ಶಿವಯೋಗಿ ಪಟ್ಟಣಶೆಟ್ಟಿ, ಅಲ್ಲಾಭಕ್ಷಿ ನಗಾರಿ, ಮಲ್ಲು ಕಬಾಡಿ ಮುಂತಾದವರು ಉಪಸ್ಥಿತರಿದ್ದರು.
PublicNext
28/04/2026 10:00 am