ಶಿರಹಟ್ಟಿ: "ದ್ವೇಷ ಬಿಡು-ಪ್ರೀತಿ ಮಾಡು" ಎಂಬ ಮಾನವೀಯ ಸಂದೇಶ ಸಾರಿದ ಇಲ್ಲಿನ ಸುಕ್ಷೇತ್ರ ಫಕೀರೇಶ್ವರ ಮಠದ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶನಿವಾರ, ಅತ್ಯಂತ ಸಡಗರದಿಂದ ‘ಕಡುಬಿನ ಕಾಳಗ’ ಜರುಗಿತು.
ಜಗದ್ಗುರು ಶ್ರೀ ಫಕೀರ ಸಿದ್ದರಾಮ ಸ್ವಾಮೀಜಿಯವರು ಅಶ್ವಾರೂಢರಾಗಿ ಭಕ್ತರ ಮೇಲೆ ಬೆಲ್ಲದ ಚೂರುಗಳನ್ನು ಎಸೆಯುವ ಮೂಲಕ ‘ಕಡುಬಿನ ಕಾಳಗ’ಕ್ಕೆ ಚಾಲನೆ ನೀಡಿದರು. ಮಠದ ಉತ್ತರಾಧಿಕಾರಿಗಳಾದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಹಿರಿಯ ಶ್ರೀಗಳಿಗೆ ಸಾಥ್ ನೀಡಿದರು. ಶ್ರೀಗಳು ಎಸೆದ ಬೆಲ್ಲದ ಚೂರುಗಳನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಯ್ದುಕೊಂಡು, ಪ್ರಸಾದದ ರೂಪದಲ್ಲಿ ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸಿದರು.
ಪೀಠದ ಪರಂಪರೆಯಂತೆ ಉಭಯ ಶ್ರೀಗಳು ಮಠದ ಆವರಣದಲ್ಲಿ ಮೂರು ಸುತ್ತು ಹಾಗೂ ಗದ್ದುಗೆಯ ಪ್ರದಕ್ಷಿಣೆ ಹಾಕಿದರು. ನಂತರ ಮಠದ ಹೊರಗಿನ ರಥದ ಬೀದಿಯಲ್ಲಿ ಎರಡು ಸುತ್ತು ಸಂಚರಿಸಿ ಭಕ್ತರಿಗೆ ಆಶೀರ್ವದಿಸಿದರು. ಈ ಸಂಪ್ರದಾಯದ ಕೊನೆಯಲ್ಲಿ ಮುಸ್ಲಿಂ ಪರಂಪರೆಯ ಅತ್ತಾರ ಕುಟುಂಬದವರು ಉಭಯ ಶ್ರೀಗಳಿಗೆ ಗುಲಾಲು ಎರಚುವ ಮೂಲಕ ಈ ಬಾರಿಯ ಕಡುಬಿನ ಕಾಳಗಕ್ಕೆ ತೆರೆ ಎಳೆದರು. ಇದು ಈ ಮಠದ ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು.
PublicNext
03/05/2026 11:18 am
LOADING...