ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡುಪ್ರಾಣಿ ಮಾನವ ಸಂಘರ್ಷ ಮುಂದುವರೆದಿದ್ದು ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ಕಾಡು ಹಂದಿ ದಾಳಿಯಿಂದ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮಲೆನಾಡು ಭಾಗದಲ್ಲಿ ಕಾಡಾನೆ ಮತ್ತು ಕಾಡೆಮ್ಮೆಗಳ ಹಾವಳಿಯ ನಡುವೆ ಈಗ ಕಾಡು ಹಂದಿಗಳ ಉಪಟಳವೂ ಹೆಚ್ಚಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಗೋಣಿಬೀಡು ಹೋಬಳಿಯ ಆಲೂರು ಗ್ರಾಮದ 41 ವರ್ಷದ ಲಕ್ಷ್ಮಿ ಎಂಬುವವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಡು ಹಂದಿ ಏಕಾಏಕಿ ದಾಳಿ ಮಾಡಿದೆ. ಹಂದಿಯ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ತಕ್ಷಣವೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಕ್ಷೇಮ ವಿಚಾರಿಸಿದ್ದಾರೆ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ನಿರಂತರ ಹಾವಳಿಯಿಂದಾಗಿ ಜನರು ತೋಟಗಳಿಗೆ ತೆರಳಲು ಭಯಪಡುವಂತಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
28/04/2026 01:11 pm
LOADING...