ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೇಸೂರಿನಲ್ಲಿ ಅಣುಸ್ಥಾವರ ಸ್ಥಾಪಿಸುವ ಸರ್ಕಾರದ ಪ್ರಸ್ತಾವನೆಗೆ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ತರಬಾರದು ಎಂದು ಆಗ್ರಹಿಸಿರುವ ಅವರು, ಈ ಕುರಿತು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸಾಗರದಲ್ಲಿ ಪಬ್ಲಿಕ್ ನೆಕ್ಸ್ಟ್ ಗೆ ಮಾತನಾಡಿದ ಹಾಲಪ್ಪ ಅವರು, ಈ ಯೋಜನೆಯ ಕುರಿತು ತಾಲೂಕು ಮತ್ತು ಜಿಲ್ಲಾಡಳಿತದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. "ಬೇಸೂರು ಅಣುಸ್ಥಾವರದ ಕುರಿತು ಕಳೆದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಸರಣಿ ಸಭೆಗಳು ನಡೆದಿವೆ. ವಿಜಯಪುರ, ವಿಜಯನಗರ, ಕೊಪ್ಪಳ ಮತ್ತು ಕಾರವಾರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಸರ ಹಾನಿಯ ಭೀತಿಯಿಂದ ಜಮೀನು ಲಭ್ಯವಿಲ್ಲವೆಂದು ವರದಿ ನೀಡಿದ್ದಾರೆ. ಆದರೆ, ನಮ್ಮ ಜಿಲ್ಲಾಧಿಕಾರಿಗಳು ಮಾತ್ರ ಸಾಗರದಲ್ಲಿ 2000 ಎಕರೆ ಜಮೀನು ಲಭ್ಯವಿದೆ ಎಂಬ ತಪ್ಪು ಮಾಹಿತಿ ನೀಡಿರುವುದು ವಿಷಾದನೀಯ" ಎಂದು ಕಿಡಿಕಾರಿದರು.
ಶರಾವತಿ ಯೋಜನೆಯಿಂದಾಗಿ ಈಗಾಗಲೇ ಸಾವಿರಾರು ಕುಟುಂಬಗಳು ನಿರ್ವಸಿತರಾಗಿದ್ದು, ಅವರ ನೋವು ಇನ್ನೂ ಹಸಿಯಾಗಿದೆ ಎಂದು ಹಾಲಪ್ಪ ನೆನಪಿಸಿದರು. "ಲಿಂಗನಮಕ್ಕಿ ಜಲಾಶಯದಿಂದ ಕೇವಲ 16 ಕಿ.ಮೀ ದೂರದಲ್ಲಿ ಈ ಅಣುಸ್ಥಾವರ ಯೋಜಿಸಲು ಹೊರಟಿರುವುದು ಅತ್ಯಂತ ಅವೈಜ್ಞಾನಿಕ ನಿರ್ಧಾರ. ಅಣುಸ್ಥಾವರಕ್ಕೆ ಬೇಕಾದ ನೀರಿನ ಸೌಲಭ್ಯದ ನೆಪದಲ್ಲಿ ಮಲೆನಾಡಿನ ವಿನಾಶಕ್ಕೆ ಹಾದಿ ಮಾಡಿಕೊಡಲಾಗುತ್ತಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಹೀಗಿರುವಾಗ ಮತ್ತೊಂದು ಬೃಹತ್ ಯೋಜನೆಗೆ ಅವಕಾಶ ನೀಡುವುದಿಲ್ಲ" ಎಂದು ಅವರು ಪ್ರಶ್ನಿಸಿದರು.
ಅಣುಸ್ಥಾವರ ಯೋಜನೆಯನ್ನು ವಿರೋಧಿಸಿ ಈಗಾಗಲೇ ಪ್ರಾಥಮಿಕ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದ್ದು, ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರವಾದಿಗಳು ಮತ್ತು ಸ್ಥಳೀಯರೊಂದಿಗೆ ಚರ್ಚಿಸಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ.
"ಇದು ಕೇವಲ ಬೇಸೂರಿನ ಪ್ರಶ್ನೆಯಲ್ಲ, ಇಡೀ ಮಲೆನಾಡಿನ ಅಸ್ತಿತ್ವ ಮತ್ತು ಉಳಿವಿನ ಪ್ರಶ್ನೆ. ಪಶ್ಚಿಮ ಘಟ್ಟಗಳ ಜೀವವೈವಿಧ್ಯಕ್ಕೆ ಧಕ್ಕೆ ತರುವ ಈ ಯೋಜನೆಯ ವಿರುದ್ಧ ಪಕ್ಷಾತೀತವಾಗಿ ಜನರನ್ನು ಸಂಘಟಿಸಿ ಹೋರಾಟ ರೂಪಿಸಲಾಗುವುದು. ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ನಾವು ಯಾವುದೇ ರೀತಿಯ ಕಠಿಣ ಹೋರಾಟಕ್ಕೂ ಸಿದ್ಧ" ಎಂದು ಹಾಲಪ್ಪ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ”
Kshetra Samachara
28/04/2026 01:29 pm