ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕಾರ್ಮಿಕರ ಹಣ ಪೋಲಾಗದು: ಸುಂಕ ಸಂಗ್ರಹಕ್ಕೆ ಗದಗ ಡಿಸಿ ತೀವ್ರ ನಿಗಾ!

ಗದಗ: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆಯು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಡಾ. ದುರಗೇಶ್ ಕೆ.ಆರ್. ಅವರು ಮಹತ್ವದ ನಿರ್ದೇಶನಗಳನ್ನು ನೀಡಿದರು.

ಜಿಲ್ಲಾ ಪಂಚಾಯತ್ ಹಾಗೂ ಅದರ ಅಧೀನಕ್ಕೆ ಬರುವ ಕಚೇರಿಗಳಿಂದ ವಿವಿಧ ಯೋಜನೆಗಳಡಿ ಪ್ರಾರಂಭವಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಶೇ. 1ರಷ್ಟು ಸುಂಕ ಭರಿಸಿರುವುದನ್ನು ಕಡ್ಡಾಯವಾಗಿ ಪರಿಶೀಲಿಸಲು ಅವರು ಸೂಚಿಸಿದರು.

ಯಾವುದೇ ಸರ್ಕಾರಿ ಇಲಾಖೆ, ಸಾರ್ವಜನಿಕ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಕಡಿತಗೊಳಿಸಿದ ಅಥವಾ ವಸೂಲು ಮಾಡಿದ ಸುಂಕವನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ರವಾನಿಸದಿದ್ದಲ್ಲಿ, ಕೂಡಲೇ ಅದನ್ನು ಮಂಡಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಾ. ದುರಗೇಶ್ ಕೆ.ಆರ್. ಕಟ್ಟುನಿಟ್ಟಾಗಿ ಸೂಚಿಸಿದರು. ಈ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ಪ್ರಗತಿ ಪರಿಶೀಲಿಸುವಂತೆ ಅವರು ನಿರ್ದೇಶನ ನೀಡಿದರು.

ಸರ್ಕಾರಿ ಇಲಾಖೆಗಳು ಅಥವಾ ಸಾರ್ವಜನಿಕ ಉದ್ದಿಮೆಗಳು ಯಾವುದೇ ನಿರ್ಮಾಣ ಕಾಮಗಾರಿಯನ್ನು ನಡೆಸಿದಲ್ಲಿ, ಅಂತಹ ಕಾಮಗಾರಿಯ ವೆಚ್ಚವನ್ನು ಪಾವತಿಸುವ ಸಂದರ್ಭದಲ್ಲೇ ಮೂಲದಲ್ಲೇ ಶೇ. 1ರಷ್ಟು ಸುಂಕವನ್ನು ಕಡಿತಗೊಳಿಸಿ ಮಂಡಳಿಗೆ ರವಾನಿಸಬೇಕು. ಅದೇ ರೀತಿ, ಯಾವುದೇ ವ್ಯಕ್ತಿಗೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ನಗರ ಸ್ಥಳೀಯ ಸಂಸ್ಥೆಗಳು ನಕ್ಷೆ ಅನುಮೋದನೆ ಅಥವಾ ಪರವಾನಿಗೆ ನೀಡುವಾಗ, ಪರವಾನಿಗೆ ನೀಡುವ ಸಮಯದಲ್ಲಿ ಶೇ. 1ರಷ್ಟು ಸುಂಕವನ್ನು ಪಡೆದುಕೊಂಡು ಮಂಡಳಿಗೆ ಕಳುಹಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ನೀಡಿದ ನಕ್ಷೆ ಅನುಮೋದನೆ ಅಥವಾ ನಿರ್ಮಾಣ ಪರವಾನಿಗೆಗಳನ್ನು ಪರಿಶೀಲಿಸಿ, ಮಾಲೀಕರು ಮತ್ತು ನಿಯೋಜಕರಿಂದ ವಸೂಲು ಮಾಡಿದ ಸುಂಕವನ್ನು ಮಂಡಳಿಗೆ ರವಾನಿಸಿರುವ ಕುರಿತು ಖಚಿತಪಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಂದೇಶ ಪಾಟೀಲ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು. ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಸರ್ವರಿಗೂ ಸ್ವಾಗತಿಸಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

28/04/2026 02:01 pm

Cinque Terre

10.46 K

Cinque Terre

0

ಸಂಬಂಧಿತ ಸುದ್ದಿ