ಸಾಗರ: ನಗರಸಭೆಯ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಮುಂದೆ ಇಂದು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿನೂತನ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ಪಾಲ್ಗೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ನ ಧೋರಣೆಯನ್ನು ಖಂಡಿಸಿದ ಅವರು, ಇದು ಕೇವಲ ರಾಜಕೀಯ ವಿರೋಧವಲ್ಲ, ಬದಲಾಗಿ ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ನಿರ್ಮಿಸುತ್ತಿರುವ ದೊಡ್ಡ ತಡೆಗೋಡೆ ಎಂದು ಟೀಕಿಸಿದರು.
ಮಹಿಳಾ ಮೀಸಲಾತಿಯ ಇತಿಹಾಸವನ್ನು ನೆನಪಿಸಿದ ಹಾಲಪ್ಪ ಅವರು, "ಈ ಮಸೂದೆಯು ಕಳೆದ 30 ವರ್ಷಗಳಿಂದ ಚರ್ಚೆಯಲ್ಲಿದ್ದು, 1996ರಿಂದಲೂ ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ಕಾಂಗ್ರೆಸ್ ಪ್ರತಿ ಹಂತದಲ್ಲೂ ಇದಕ್ಕೆ ಅಡ್ಡಗಾಲು ಹಾಕುತ್ತಾ ಬಂದಿದೆ. ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಮಹಿಳೆಯರಿಗೆ ಅಧಿಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬದ್ಧವಾಗಿದೆ. ಆದರೆ ಕಾಂಗ್ರೆಸ್‌ಗೆ ಈ ಐತಿಹಾಸಿಕ ಬದಲಾವಣೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ," ಎಂದು ಕಿಡಿಕಾರಿದರು.
ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಮೀಸಲಾತಿ ಕುರಿತು ಕಾಂಗ್ರೆಸ್ ಸುಳ್ಳು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಿದ ಅವರು, "ಮಹಿಳಾ ಮೀಸಲಾತಿಯಿಂದ ಕರ್ನಾಟಕದ ಶಾಸಕರ ಸಂಖ್ಯೆ 224ರಿಂದ 336ಕ್ಕೆ ಹಾಗೂ ಲೋಕಸಭಾ ಸ್ಥಾನಗಳ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗಲಿದೆ. ಹೀಗಿದ್ದರೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂಬ ಸುಳ್ಳು ಸುದ್ದಿ ಹರಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಮಹಿಳೆಯರ ಶಾಪದಿಂದ ಕಾಂಗ್ರೆಸ್ ಈಗಾಗಲೇ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಉಳಿದ ರಾಜ್ಯಗಳಲ್ಲೂ ಕಾಂಗ್ರೆಸ್‌ನ ಅವನತಿ ಖಚಿತ," ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು ಪಾರ್ಲಿಮೆಂಟ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಬೇಷರತ್ ಬೆಂಬಲ ನೀಡಬೇಕೆಂದು ಅವರು ಒತ್ತಾಯಿಸಿದರು. "ಮಹಿಳೆಯರ ಆಶೀರ್ವಾದ ಪಡೆಯಲು ಕಾಂಗ್ರೆಸ್‌ಗೆ ಇಂದಿಗೂ ಅವಕಾಶವಿದೆ. ಸಂವಿಧಾನಾತ್ಮಕ ತಿದ್ದುಪಡಿಯ ಮೂಲಕ ಈ ಮಸೂದೆಯನ್ನು ಜಾರಿಗೆ ತರಲು ಸಹಕರಿಸಬೇಕು. ಇಲ್ಲದಿದ್ದರೆ ಇತಿಹಾಸದಲ್ಲಿ ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷವಾಗಿ ದಾಖಲಾಗಲಿದೆ," ಎಂದು ಹಾಲಪ್ಪ ಎಚ್ಚರಿಸಿದರು.
PublicNext
28/04/2026 03:24 pm