ಧಾರವಾಡ: ಒಂದೆಡೆ ಬಡತನ. ಮತ್ತೊಂದೆಡೆ ತಂದೆಯ ಪ್ರೀತಿ ಏನು ಅಂತಲೇ ಗೊತ್ತಿಲ್ಲ. ತಾಯಿಯ ಆಸರೆಯಲ್ಲಿ ಬೆಳೆಯುತ್ತಿದ್ದ ಮಗನಿಗೆ ಪೊಲೀಸರೇ ಮುಳುವಾಗಿದ್ದಾರೆ. ಮುಳುವಾಗುವುದಷ್ಟೇ ಅಲ್ಲ. ತಾನು ವಿದ್ಯೆ ಕಲಿತು ತನ್ನ ತಾಯಿಯನ್ನು ಸಾಕಬೇಕು ಎಂದುಕೊಂಡಿದ್ದ ಆ ಯುವಕ ಇದೀಗ ಮರ್ಯಾದೆಗೆ ಅಂಜಿ ಇಹಲೋಕವನ್ನೇ ತ್ಯಜಿಸಿದ್ದಾನೆ.
ಹೌದು! ಈ ಫೋಟೋದಲ್ಲಿ ಕಾಣುತ್ತಿರುವ ಯುವಕನ ಹೆಸರು ಆದಿತ್ಯಾ ಮ್ಯಾಗೇರಿ ಅಂತಾ. ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಆದಿತ್ಯಾ ಧಾರವಾಡದ ಗಿರಿನಗರದಲ್ಲಿ ತನ್ನ ಸ್ನೇಹಿತರೊಂದಿಗೆ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ. ಆದಿತ್ಯಾನ ವಿದ್ಯಾಭ್ಯಾಸಕ್ಕೆ ಆತನ ತಾಯಿ ಕಷ್ಟಪಟ್ಟು ಸಹಾಯ ಮಾಡುತ್ತಿದ್ದಳು. ಇವರು ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದವರು. ಆದಿತ್ಯಾನ ತಾಯಿ, ತನ್ನ ಮಗ ಹೇಗಾದರೂ ವಿದ್ಯಾವಂತನಾದರೆ ಅಷ್ಟೇ ಸಾಕು ಎಂದು ಆತನನ್ನು ಧಾರವಾಡಕ್ಕೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು.
ಕಳೆದ ಶನಿವಾರವಷ್ಟೇ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಆದಿತ್ಯಾ ಮ್ಯಾಗೇರಿ ಸೇರಿದಂತೆ ಕೆಲವರನ್ನು ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂದು ವಶಕ್ಕೆ ಪಡೆದಿದ್ದರು. ಆದರೆ, ಆದಿತ್ಯಾನನ್ನು ತಪಾಸಣೆಗೊಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿಲ್ಲ ಎಂದು ನೆಗೆಟಿವ್ ರಿಪೋರ್ಟ್ ಕೂಡ ಬಂದಿತ್ತು. ಆ ದಿನ ಸುಮಾರು 40 ಜನ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದರು. ತಪಾಸಣೆಗೊಳಪಡಿಸಿದಾಗ ಆದಿತ್ಯಾನ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆದರೂ ಪೊಲೀಸರು ಆತನ ಬಳಿ 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಕೊನೆಗೆ ಆತನಿಂದ 2 ಸಾವಿರ ಪಡೆದು ಆದಿತ್ಯಾನನ್ನು ಬಿಟ್ಟು ಕಳುಹಿಸಿದ್ದರು. ಇದು ಆದಿತ್ಯಾನನ್ನು ಹಿಂಸೆಗೀಡು ಮಾಡಿತ್ತು. ಯಾವಾಗ ಗಾಂಜಾ ಪ್ರಕರಣದಡಿ ತನ್ನನ್ನು ಪೊಲೀಸರು ಕರೆದುಕೊಂಡು ಹೋದರೋ ಆಗಿನಿಂದ ಆದಿತ್ಯಾ ಮಾನಸಿಕವಾಗಿ ಜರ್ಜರಿತನಾಗಿದ್ದ. ಮರ್ಯಾದೆಗೆ ಅಂಜಿ ಇದೀಗ ಆದಿತ್ಯಾ ಗಿರಿನಗರದಲ್ಲಿ ತಾನಿದ್ದ ರೂಮ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆ ಮೂಲಕ ಬಾಳಿ ಬದುಕಿ ತನ್ನ ತಾಯಿಗೆ ಆಸರೆಯಾಗಬೇಕಿದ್ದ ಆದಿತ್ಯ ಮೋಡಗಳ ಮರೆಯಲ್ಲಿ ಕಣ್ಮರೆಯಾಗಿ ಹೋಗಿದ್ದಾನೆ. ಧಾರವಾಡ ಶವಾಗಾರದ ಎದುರು ಆತನ ತಾಯಿ ಕವಿತಾ ರೋದಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ತನಗಾದ ಅನ್ಯಾಯ ಇನ್ನ್ಯಾರಿಗೂ ಆಗದಿರಲಿ ಎಂದು ಕವಿತಾ ಗೋಳಾಡುತ್ತಿದ್ದರು.
ಗಾಂಜಾ ಪ್ರಕರಣದಡಿ ಎಷ್ಟು ಜನ ಯುವಕರನ್ನು ಪೊಲೀಸರು ಕರೆದುಕೊಂಡು ಹೋಗುತ್ತಾರೋ ಅವರನ್ನೆಲ್ಲ ತಪಾಸಣೆಗೊಳಪಡಿಸುತ್ತಾರೆ. ಯಾರ ವರದಿ ಪಾಸಿಟಿವ್ ಬರುತ್ತದೆಯೋ ಅಂತವರಿಂದ ಪೊಲೀಸರು ಮೂರನೇ ವ್ಯಕ್ತಿ ಮುಖಾಂತರ ಹಣ ವಸೂಲಿ ಮಾಡುತ್ತಾರೆ. ಪೊಲೀಸರು 25-30 ಹಣವನ್ನು ಫೋನ್ ಪೇ ಮುಖಾಂತರವೂ ಹಾಕಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೀಗ ಕೇಳಿ ಬಂದಿದೆ.
ಅದೇನೇ ಇರಲಿ ಗಾಂಜಾ ಪೆಡ್ಲರ್‌ಗಳನ್ನು ಮಟ್ಟ ಹಾಕುವ ಭರದಲ್ಲಿ ಅಮಾಯಕ ಯುವಕರು ಇದೀಗ ಪೊಲೀಸರ ಕಾಟಕ್ಕೆ ಬಲಿಯಾಗುತ್ತಿದ್ದಾರಾ ಎಂಬ ಸಂಶಯ ಮೂಡಿದೆ. ಖಡಕ್ ಐಪಿಎಸ್ ಆಫೀಸರ್ ಎನಿಸಿಕೊಂಡಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅಷ್ಟೇ ಅಲ್ಲದೇ ಆದಿತ್ಯಾನಿಗೆ ಕಿರುಕುಳ ಕೊಟ್ಟ ಪೊಲೀಸರ ಮೇಲೆ ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/04/2026 04:10 pm