ಸಾಗರ:ಇಲ್ಲಿನ ಸೊರಬ ರಸ್ತೆಯಲ್ಲಿರುವ ಪ್ರಸಿದ್ಧ ದುರ್ಗಾಂಬಾ ದೇವಸ್ಥಾನದ ಹಿಂಭಾಗದಲ್ಲಿ ಹರಿಯುವ ವರದಾ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ಸಿಲುಕಿಕೊಂಡಿದ್ದ ಎಮ್ಮೆಯ ಕರುವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ನದಿಯ ಆಳವಾದ ಭಾಗದಲ್ಲಿ ಸಿಲುಕಿದ್ದ ಕರುವು ದೀರ್ಘಕಾಲದ ಹೋರಾಟದಿಂದಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆಯೇ ಸಾಗರ ಅಗ್ನಿಶಾಮಕ ಠಾಣಾ ಅಧಿಕಾರಿ ವಿನಾಯಕ ಹೆಗ್ಗ ನಾಯಕ ಅವರ ನೇತೃತ್ವದ ತಂಡವು ಕ್ಷಿಪ್ರಗತಿಯಲ್ಲಿ ಘಟನಾ ಸ್ಥಳಕ್ಕೆ ಧಾವಿಸಿತು. ನದಿಯ ನೀರಿನ ಸೆಳೆತ ಹಾಗೂ ಕೆಸರಿನ ನಡುವೆ ಸಿಲುಕಿದ್ದ ಕರುವನ್ನು ಮೇಲೆತ್ತಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಾ ಸಿಬ್ಬಂದಿಗೆ ಸಾಥ್ ನೀಡಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸತತ ಕಾರ್ಯಾಚರಣೆಯ ನಂತರ, ಅಗ್ನಿಶಾಮಕ ದಳದವರು ಕರುವನ್ನು ಸುರಕ್ಷಿತವಾಗಿ ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು. ಸಕಾಲದಲ್ಲಿ ಸ್ಪಂದಿಸಿದ ತಂಡದ ಕಾರ್ಯವೈಖರಿಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಂತೋಷ್ ಬಿ., ಗಣೇಶ್ ಆರ್ ಶೇಟ್, ಮಾರುತಿ ಬಡಿಗೇರ, ಚಾಲಕ ಆನಂದ ವಡ್ಡರ್ ಪಾಲ್ಗೊಂಡಿದ್ದರು.
ಇವರೊಂದಿಗೆ ಅಗ್ನಿಶಾಮಕ ಸಿಬ್ಬಂದಿಗಳಾದ ರಾಜೇಂದ್ರ ಕುಮಾರ್ ಸಿ.ಜಿ., ವಿಶ್ವನಾಥರೆಡ್ಡಿ ಜಿ., ಮೈನೋದ್ದಿನ್ ನೂರಅಹ್ಮದ್ ಮುಲ್ಲಾ, ಸುನೀಲ ಮೋರೆ ಹೆಚ್.ಟಿ. ಹಾಗೂ ಭೀಮ್ ರಾಜ್ ಅವರು ಶ್ರಮವಹಿಸಿ ಕರುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಕರುವು ಪ್ರಾಣಾಪಾಯದಿಂದ ಪಾರಾಗಿದ್ದು, ಮಾಲೀಕರ ವಶಕ್ಕೆ ಒಪ್ಪಿಸಲಾಗಿದೆ.
ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ ”
Kshetra Samachara
28/04/2026 08:19 pm
LOADING...